ಕೈಕಂಬ : ಎಡಪದವಿನಲ್ಲಿ ಮಂಗಳೂರು ಕಡೆಗೆ ಯಮವೇಗದಲ್ಲಿ ಸಾಗುತ್ತಿದ್ದ ಓಮ್ನಿ ಕಾರೊಂದು ರಸ್ತೆ ಬದಿಯಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ವ್ಯಕ್ತಿಯೊಬ್ಬರಿಗೆ ಡಿಕ್ಕಿ ಹೊಡೆದಿದ್ದು, ಬಲವಾಗಿ ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡ ವ್ಯಕ್ತಿ ಸ್ಥಳದಲ್ಲೇ ಅಸುನೀಗಿದ ಘಟನೆ 28ರಂದು ಭಾನುವಾರ ಬೆಳಿಗ್ಗೆ ನಡೆದಿದೆ.
ಮೂಲತಃ ಗುರುಪುರದವರಾಗಿದ್ದ ದಿ. ಉಮೇಶ್ ಅಡ್ಯಂತಾಯರ ಪುತ್ರ, ವೃತ್ತಿಯಲ್ಲಿ ಬಸ್ ಚಾಲಕರಾಗಿರುವ ಎಡಪದವು ಪದ್ರೆಂಗಿಯ ನಿವಾಸಿ ಅರುಣ್ ಅಡ್ಯಂತಾಯ(೪೦) ಮೃತಪಟ್ಟ ವ್ಯಕ್ತಿಯಾಗಿದ್ದಾರೆ.
ಬೆಳಿಗ್ಗೆ ಬಸ್ ಕೆಲಸಕ್ಕೆಂದು ಮಂಗಳೂರಿಗೆ ತೆರಳಲು ರಸ್ತೆ ಬದಿಯಲ್ಲಿ ನಿಂತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಅಪಘಾತ ನಡೆಸಿದ ಕಾರಿನ ಚಾಲಕ ಕಾರನ್ನು ನಿಲ್ಲಿಸದೆ ಪರಾರಿಯಾಗಿದ್ದಾನೆ. ಇದೇ ಕಾರು ಗಂಜಿಮಠದಲ್ಲಿ ಮತ್ತೊಂದು ವಾಹನಕ್ಕೂ ಡಿಕ್ಕಿ ಹೊಡೆದಿದೆ ಎಂದು ಗೊತ್ತಾಗಿದೆ.
ಗಾಯಾಳುವನ್ನು ತಕ್ಷಣ ಮೂಡಬಿದ್ರಿಗೆ ಕೊಂಡೊಯ್ಯಲಾಗಿದ್ದು, ಬಳಿಕ ಮಂಗಳೂರಿನ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. ಬಜ್ಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಮೃತರು ತಾಯಿ, ಇಬ್ಬರು ಕಿರಿಯ ಸಹೋದರರು, ಪತ್ನಿ, ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.
ಸೀಸಿಟೀವಿ ಫೂಟೇಜ್ ಆಧರಿಸಿ ಕಾರಿನ ನಂಬ್ರ ಟ್ರೇಸ್ ಮಾಡಲಾಗಿದೆ. ಆರೋಪಿಯನ್ನು ಶೀಘ್ರ ಪತ್ತೆ ಹಚ್ಚುತ್ತೇವೆ ಎಂದು ಬಜ್ಪೆ ಠಾಣಾ ಪೊಲೀಸ್ ವೃತ್ತ ನಿರೀಕ್ಷಕ ಸಂದೇಶ ಪಿ ಜಿ ತಿಳಿಸಿದರು.
