ಬಡ ಮಹಿಳೆ ಮನೆ ಕಟ್ಟಲು ಖಾಸಗಿ ವ್ಯಕ್ತಿಗಳ ಅಡ್ಡಿ. ಜಿಲ್ಲಾಧಿಕಾರಿ ಮತ್ತು ಮಹಿಳಾ ಆಯೋಗದ ಮೊರೆ ಹೋದ ಮಹಿಳೆ.
ಬಂಟ್ವಾಳ: ಸರಕಾರ ಕೊಟ್ಟ ನಿವೇಶನದಲ್ಲಿ ಬಡ ಮಹಿಳೆಯೊಬ್ಬರು ಮನೆ ನಿರ್ಮಾಣ ಮಾಡುವುದಕ್ಕೆ ಖಾಸಗಿ ವ್ಯಕ್ತಿಗಳಿಬ್ಬರು ಅಡ್ಡಿ ಪಡಿಸಿ ಮಾನಸಿಕ ಹಿಂಸೆ ನೀಡುತ್ತಿರುವ ಬಗ್ಗೆ ನೊಂದ ಮಹಿಳೆ ದ.ಕ.ಜಿಲ್ಲಾಧಿಕಾರಿಯವರಿಗೆ ದೂರು ನೀಡಿದ್ದಾರೆ.
ಬಂಟ್ವಾಳ ತಾಲೂಕಿನ ಚೆನ್ನೈತ್ತೋಡಿ ಗ್ರಾಮ ಪಂಚಾಯತು ವ್ಯಾಪ್ತಿಯ ಅಜ್ಜಿಬೆಟ್ಟು ಗ್ರಾಮದ ಆಲದಪದವು ಶ್ರೀನಿವಾಸ ನಗರ ಎಂಬಲ್ಲಿನ ನಿವಾಸಿಯಾಗಿರುವ ರೋಹಿಣಿ ಪೂಜಾರ್ತಿ ಎಂಬವರು ತನಗೆ ಮನೆ ಕಟ್ಟಲು ಅಡ್ಡಿಪಡಿಸುತ್ತಿರುವ ಸ್ಥಳೀಯ ನಿವಾಸಿಗಳಾದ ಆದಪ್ಪ ಮಡಿವಾಳ ಮತ್ತು ಅವರ ಮಗನಾದ ರೋಹಿತ್ ಮಡಿವಾಳ ಎಂಬವರ ವಿರುದ್ಧ ದ.ಕ.ಜಿಲ್ಲಾಧಿಕಾರಿಯವರಿಗೆ ದೂರು ನೀಡಿದ್ದು ಕರ್ನಾಟಕ ರಾಜ್ಯ ಮಹಿಳಾ ಆಯೋಗಕ್ಕೂ ಮನವಿ ಸಲ್ಲಿಸಿ ನ್ಯಾಯ ಕೋರಿದ್ದಾರೆ. ತಕ್ಷಣ ಕಾನೂನು ಕ್ರಮ ಕೈಗೊಳ್ಳದಿದ್ದಲ್ಲಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಅವರು ಮನವಿಯಲ್ಲಿ ತಿಳಿಸಿದ್ದಾರೆ.
ಸರಕಾರ ನಮಗೆ ನೀಡಿದ ಮೂರುವರೆ ಸೆನ್ಸ್ ನಿವೇಶನದಲ್ಲಿ ನಾವು ಸರಕಾರಿ ಬೋರ್ ವೆಲ್ ತೆಗೆಯಲು ಆಕ್ಷೇಪ ವ್ಯಕ್ತಪಡಿಸಿದ್ದೇವೆ ಎಂಬ ಒಂದೇ ಕಾರಣಕ್ಕಾಗಿ ಪಕ್ಷ/ ಸಂಘಟನೆಯೊಂದರ ಕಾರ್ಯಕರ್ತರಿಬ್ಬರು ನಮಗೀಗ ನಮ್ಮ ನಿವೇಶನದಲ್ಲಿ ಹೊಸಮನೆ ಕಟ್ಟಲು ಅಡ್ಡಪಡಿಸುತ್ತಿದ್ದಾರೆ ಎಂದು ರೋಹಿಣಿ ಪೂಜಾರಿ ಮನವಿಯಲ್ಲಿ ತಿಳಿಸಿದ್ದಾರೆ.
ಮನವಿಯ ವಿವರ
ನಾನು ಸದ್ರಿ ವಿಳಾಸದಲ್ಲಿ ನನ್ನ ಗಂಡ, ಮಗ, ಸೊಸೆ ಸಹಿತ ಮೊಮ್ಮಕ್ಕಳೊಂದಿಗೆ ಕಳೆದ 38 ವರ್ಷಗಳಿಂದ ಸರಕಾರ ಕೊಟ್ಟ 3.5 ಸೆನ್ಸ್ ಜಾಗದಲ್ಲಿ ಚಿಕ್ಕ ಮನೆ ಕಟ್ಟಿ ವಾಸಿಸುತ್ತಿದ್ದೇವೆ. ಆರ್ಥಿಕವಾಗಿ ಬಡವರಾಗಿರುವ ನಮಗೆ ಈ ಜಾಗ ಬಿಟ್ಟರೆ ಬೇರೆ ಯಾವುದೇ ಜಾಗ, ಭೂಮಿ ಅಥವಾ ಆಸ್ತಿ ಇರುವುದಿಲ್ಲ.
ನಾನು ಇತ್ತೀಚೆಗೆ ನನ್ನ ಹಳೇ ಮನೆ ಬೀಳುವ ಸ್ಥಿತಿಯಲ್ಲಿದ್ದರಿಂದ ಅದನ್ನು ತೆರವುಗೊಳಿಸಿ ಹೊಸ ಮನೆ ಕಟ್ಟುತ್ತಿದ್ದೇವೆ. ಸ್ಥಳಕ್ಕೆ ಸಂಬಂಧಿಸಿದಂತೆ ಎಲ್ಲಾ ದಾಖಲೆಗಳಿದ್ದು ಹೊಸ ಮನೆ ಕಟ್ಟುವರೇ ಚೆನ್ನೈತ್ತೋಡಿ ಗ್ರಾಮ ಪಂಚಾಯತು ಪರವಾನಿಗೆ ನೀಡಿದೆ. ಈ ಹಿನ್ನೆಲೆಯಲ್ಲಿ ಬ್ಯಾಂಕು ಸಾಲ ಮಾಡಿ ಕಳೆದ 2021ರ ಸೆಪ್ಟಂಬರ್ 3 ರಂದು ಮನೆ ಕೆಲಸ ಆರಂಭಿದ್ದು ಸ್ಲ್ತಾಪ್ ಹಂತದ ಕೆಲಸ ಮುಗಿದು ಮುಂದಿನ ಕಾಮಗಾರಿ ಮುಂದುವರಿದೆ.
ಆದರೆ ಸ್ಥಳೀಯ ನಿವಾಸಿಯಾದ ಆದಪ್ಪ ಮಡಿವಾಳ ಮತ್ತು ಅವರ ಮಗನಾದ ರೋಹಿತ್ ಮಡಿವಾಳ ಎಂಬವರು ಕಳೆದೆರಡು ತಿಂಗಳಿನಿಂದಲೂ ನಮ್ಮ ಮನೆ ನಿರ್ಮಾಣ ಕಾರ್ಯಕ್ಕೆ ವಿನಾಕಾರಣ ಅಡ್ಡಿ ಪಡಿಸುತ್ತಿದ್ದಾರೆ. ಈ ಹಿಂದೆ ನಮ್ಮ ಜಾಗದಲ್ಲಿ ಸರಕಾರಿ ಬೋರ್ ವೆಲ್ ತೆರೆಯಲು ನಾವು ಆಕ್ಷೇಪ ಮಾಡಿದ್ದೇವೆ ಎಂಬ ಕಾರಣಕ್ಕಾಗಿ ನಮ್ಮ ಕೆಲಸಕ್ಕೆ ಅಡ್ಡಿಪಡಿಸುತ್ತಿದ್ದು ಆಗಾಗ್ಗೆ ಬಂದು ಪೋಟೋ ತೆಗೆಯುವುದು, ಬೇರೆ ಬೇರೆ ಕಡೆಗಳಿಗೆ ದೂರು ನೀಡಿ ನಮ್ಮ ಕೆಲಸವನ್ನು ವಿಳಂಬ ಮಾಡಿಸುವುದು, ನಮ್ಮ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುವ ಮೂಲಕ ಈಗಾಗಲೇ ಅನಾರೋಗ್ಯ ಪೀಡಿತಳಾದ ನನಗೆ ಮತ್ತಷ್ಟು ಮಾನಸಿಕ ಹಿಂಸೆ ನೀಡುತ್ತಿದ್ದಾರೆ.
ತಾಲೂಕು ಪಂಚಾಯತು ಮತ್ತು ಗ್ರಾಮ ಪಂಚಾಯತು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮನೆ ನಿರ್ಮಾಣಕ್ಕೆ ಅವಕಾಶ ನೀಡಿದ್ದರೂ ಇವರು ಸುಮ್ಮನಿರದೆ ಮತ್ತೆ ಮತ್ತೆ ಬೇರೆ ಬೇರೆ ಕಡೆಗೆ ದೂರು ನೀಡುತ್ತಾ ಮಾನಸಿಕ ಹಿಂಸೆ ನೀಡುತ್ತಿರುವುದರಿಂದ ವಯೋವೃದ್ಧಳಾದ ನಾನು ತೀವ್ರ ಅಘಾತಕ್ಕೀಡಾಗಿದ್ದೇನೆ. ಇದರಿಂದ ನನ್ನ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಯಾವುದೇ ರೀತಿಯಲ್ಲಿ ತೊಂದರೆಯಾದಲ್ಲಿ ಸಂಬಂಧಪಟ್ಟವರೇ ಹೊಣೆಗಾರರು ಎಂದು ತಿಳಿಸಬಯಸುತ್ತೇನೆ ಮತ್ತು ಈ ರೀತಿಯ ಹಿಂಸೆ ಮುಂದುವರಿದ್ದಲ್ಲಿ ನಾವು ಸಾಮೂಹಿಕವಾಗಿ ಆತ್ಮಹತ್ಯೆಗೆ ಶರಣಾಗುತ್ತೇವೆ ಎಂಬುದನ್ನೂ ತಿಳಿಸಬಯಸುತ್ತೇವೆ ಎಂದವರು ಮನವಿಯಲ್ಲಿ ವಿವರಿಸಿದ್ದಾರೆ.
ತಾವು ಈ ಬಗ್ಗೆ ಪರಿಶೀಲಿಸಿ ನಮಗೆ ನ್ಯಾಯ ಒದಗಿಸಿಕೊಡಬೇಕೆಂದು ಅವರು ಜಿಲ್ಲಾಧಿಕಾರಿಯವರಿಗೆ ಸಲ್ಲಿಸಿದ ದೂರಿನಲ್ಲಿ ಒತ್ತಾಯಿಸಿದ್ದು ಈಗಾಗಲೇ ಖಾಸಗಿ ವ್ಯಕ್ತಿಗಳ ಉಪಟಳದಿಂದ ನೊಂದ ಮಹಿಳೆ ಕರ್ನಾಟಕ ರಾಜ್ಯ ಮಹಿಳಾ ಹಕ್ಕುಗಳ ಆಯೋಗ, ದ.ಕ.ಜಿಲ್ಲಾ ಮಹಿಳಾ ದೌರ್ಜನ್ಯ ತಡೆ ಸಮಿತಿ, ಬಂಟ್ವಾಳ ತಾಲೂಕು ಪಂಚಾಯತು, ಬಂಟ್ವಾಳ ತಹಶೀಲ್ದಾರರು ಹಾಗೂ ಚೆನ್ನೈತ್ತೋಡಿ ಗ್ರಾಮ ಪಂಚಾಯತಿಗೂ ದೂರು ನೀಡಿದ್ದಾರೆ.