ಮೂಡುಬಿದಿರೆ: ಸಾಹಿತಿ ಪಳಕಳ ಸೀತಾರಾಮ ಭಟ್ಟ ಅವರ ಸ್ಮರಣಾರ್ಥ ಪಂಚಾಯಿತಿ ಅಳವಡಿಸಿರುವ ರಸ್ತೆಯ ನಾಮಫಲಕವು ಖಾಸಗಿ ಜಾಗದಲ್ಲಿದೆ ಎಂದು ಜಾಗಕ್ಕೆ ಸಂಬಂಧಪಟ್ಟವರು ಆಕ್ಷೇಪ ವ್ಯಕ್ತಪಡಿಸಿದಲ್ಲದೆ ಓರ್ವ ರಾಷ್ಟ್ರ ಮಟ್ಟದ ಸಾಹಿತಿಯೋರ್ವರ ಹೆಸರನ್ನು ಗ್ರಾಮದ ಒಳ ರಸ್ತೆಗೆ ಇಡುವ ಬದಲು ಪಟ್ಟಣದ ಅಥವಾ ಹೆದ್ದಾರಿಯ ಪ್ರಮುಖ ಸ್ಥಳಗಳಿಗೆ ನಾಮಕರಣ ಮಾಡಿದರೆ ಒಳಿತು ಎಂದು ಜಿ.ಪಂ ಮಾಜಿ ಅಧ್ಯಕ್ಷ ಕೆ.ಪಿ ಸುಚರಿತ ಶೆಟ್ಟಿ ಸಲಹೆ ನೀಡಿದರು.
ಪುತ್ತಿಗೆ ಪಂಚಾಯಿತಿ ಸಮುದಾಯ ಭವನದಲ್ಲಿ ಪಂಚಾಯಿತಿ ಅಧ್ಯಕ್ಷ ಪ್ರವೀಣ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಪುತ್ತಿಗೆ ಗ್ರಾ.ಪಂ ಪ್ರಥಮ ಹಂತದ ಗ್ರಾಮಸಭೆಯಲ್ಲಿ ಅವರು ಪಳಕಳರ ಹೆಸರಿನ ರಸ್ತೆಯ ಪ್ರಸ್ತಾಪ ಮಾಡಿದರು.
ಸರ್ಕಾರಿ ಶಾಲೆಗಳಲ್ಲಿರುವ ಮೂಲಭೂತ ಸೌಕರ್ಯಗಳ ಕೊರತೆ, ಶಿಕ್ಷಕರ ಕೊರತೆ ಕುರಿತು ಚರ್ಚೆ ನಡೆಯಿತು. ಸರ್ಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಗ್ರಾಮ ಮಟ್ಟದಲ್ಲೇ ಹೋರಾಟಗಳಾಗಬೇಕು ಎನ್ನುವ ಆಗ್ರಹ ಗ್ರಾಮಸ್ಥರಿಂದ ಕೇಳಿಬಂತು. ಸಹಾಯಕ ಕೃಷಿ ಅಧಿಕಾರಿ ಯುಗೇಂದ್ರ ನೋಡೆಲ್ ಅಧಿಕಾರಿಯಾಗಿ ಭಾಗವಹಿಸಿದ್ದರು.
ಮುಖ್ಯಮಂತ್ರಿಗಳ ಪದಕ ಪಡೆದಿರುವ ಅಗ್ನಿಶಾಮಕದಳ ಕೃಷ್ಣ ನಾಯ್ಕ್ ಹಾಗೂ ಸ್ಮಶಾನ ಪಾಲಕ ವೆಂಕಪ್ಪ ನಾಯ್ಕ್ ಅವರನ್ನು ಗೌರವಿಸಲಾಯಿತು.
