ಕೈಕಂಬ : ಇತ್ತೀಚೆಗೆ ಗುರುಪುರದಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ದುರ್ಘಟನೆಗಳಲ್ಲಿ ಸಾವನ್ನಪ್ಪಿದ ಕಂಬಳ ಕ್ಷೇತ್ರದ ಹಿರಿಯ ವ್ಯಕ್ತಿ, ಕಂಬಳ ಕೋಣಗಳ ಯಜಮಾನ ಗುರುಪುರ ಕೆದುಬರಿ ಗುರುವಪ್ಪ ಪೂಜಾರಿ ಮತ್ತು ಸಾಮಾಜಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಹೆಸರು ಮಾಡಿರುವ ಗುರುಪುರ ಕಾರಮೊಗರುಗುತ್ತು ಕಿಟ್ಟಣ್ಣ ರೈ ಅವರಿಗೆ ಗುರುಪುರ ಯುವಕ ಸಂಘವು(ರಿ) ಗುರುಪುರ ಕುಕ್ಕುದಕಟ್ಟೆ ಶ್ರೀ ವೈದ್ಯನಾಥ ಸಮುದಾಯ ಭವನದಲ್ಲಿ ಬುಧವಾರ ಸಂಜೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆ ಆಯೋಜಿಸಿತು.
ಲಕ್ಷ್ಮಣ್ ಶೆಟ್ಟಿ ಗುರುಪುರ ಪ್ರಸ್ತಾವಿಕ ಮಾತನಾಡಿದರು. ಕಿಟ್ಟಣ್ಣ ರೈಯವರ ಗುರುಗಳಾದ ನಿವೃತ್ತ ಶಿಕ್ಷಕ, ಪೊಳಲಿ ದೇವಳದ ಉದ್ಯೋಗಿ ಸುರೇಶ್ ರಾವ್ ನೂಯಿ ಮಾತನಾಡಿ, ”ನಾವಿಬ್ಬರು ಒಟ್ಟಾಗಿ ಅನೇಕ ನಾಟಕಗಳಲ್ಲಿ ಅಭಿನಯಿಸಿದ್ದೆವು. ಅವರು ಎಲ್ಲೇ ಸಿಗಲಿ ನನ್ನ ಕಾಲಿಗೆ ಬಿದ್ದು ನಮಸ್ಕರಿಸುವ ಔದಾರ್ಯ ಬೆಳೆಸಿಕೊಂಡಿದ್ದರು” ಎಂದರು.
ಗುರುಪುರ ಇಸ್ತ್ರಿ ಅಂಗಡಿಯ ಬಾಬು ಸಾಲ್ಯಾನ್ ಮಾತನಾಡಿ, ‘ಪ್ರಗತಿಪರ ಕೃಷಿಕರಾದ ಇಬ್ಬರೂ ನನ್ನಾಪ್ತರಾಗಿದ್ದರು. ನನ್ನೊಂದಿಗೆ ಇದ್ದಾಗಲೇ ರೈಯವರಿಗೆ ಸಾವು ಸಂಭವಿಸಿತು. ಅಂದಿನ ಘಟನೆ ಅತೀವ ಖೇದಕರ” ಎಂದು ಕಣ್ಣೀರಿಟ್ಟರು.
ನಿವೃತ್ತ ಅಂಚೆ ಉದ್ಯೋಗಿ, ನಾಟಕಕಾರ ರತ್ನಾಕರ(ರತನ್ ಜಿ), ಕಾಂಗ್ರೆಸ್ ಮುಖಂಡ ಯಶವಂತ ಆಳ್ವ, ಗುರುಪುರ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನಿಯಮಿತ ಅಧ್ಯಕ್ಷ ಓಂಪ್ರಕಾಶ್ ಶೆಟ್ಟಿ ಮತ್ತು ಸತೀಶ್ ಕಾವ ಅಗಲಿದ ಇಬ್ಬರ ಬಗ್ಗೆ ಗುಣಗಾನ ಮಾಡಿ ಶ್ರದ್ಧಾಂಜಲಿ ಅರ್ಪಿಸಿದರು. ವಸಂತ ಸುವರ್ಣ ಗುರುಪುರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಸಭೆಯಲ್ಲಿ ಊರ-ಪರವೂರ ಅನೇಕ ಅಭಿಮಾನಿಗಳು, ಕೃಷಿಕರು, ಸಂಘ-ಸAಸ್ಥೆಗಳ ಪದಾಧಿಕಾರಿಗಳು, ನಾಗರಿಕರು ಪಾಲ್ಗೊಂಡಿದ್ದರು.
