ಮುಂಬಯಿ : ಕರ್ನಾಟಕ ರಾಜ್ಯ ಸರಕಾರದ ಇಂಧನ, ಕನ್ನಡ ಮತ್ತು ಸಂಸ್ಕೃತಿ ಖಾತೆ ನೂತನ ಸಚಿವ ವಿ. ಸುನಿಲ್ಕುಮಾರ್ ಅವರನ್ನು ಕಾರ್ಕಳದಲ್ಲಿನ ಸಚಿವರ ಕಚೇರಿ ‘ವಿಕಾಸ’ದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ.ಕತ್ತಲ್ಸಾರ್ ನಿಯೋಗವು ಭೇಟಿ ನೀಡಿ ಅಭಿನಂದಿಸಿತು.
ನಿಯೋಗದಲ್ಲಿ ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾದ ನಿಟ್ಟೆ ಶಶಿಧರ ಶೆಟ್ಟಿ, ನರೇಂದ್ರ ಕೆರೆಕಾಡು, ಚೇತಕ್ ಪೂಜಾರಿ, ಸಂತೋಷ್ ಪೂಜಾರಿ ಕಾರ್ಕಳ ಭೇಟಿ ನೀಡಿ ಮಾತುಕತೆ ನಡೆಸಿ ಸಚಿವರನ್ನು ಅಭಿನಂದಿಸಿ ತುಳುನಾಡಿನ ಸಿರಿತುಪ್ಪೆ ಹಾಗೂ ತುಳು ಆಟಿ ತಿಂಗಳಿನ ವಿಶೇಷತೆಯ ಪುಸ್ತಕ ನೀಡಿ ಅಭಿನಂದಿಸಿತು.
ತುಳು ಅಕಾಡೆಮಿಗೆ ಶೀಘ್ರ ಭೇಟಿ ನೀಡುವೆ: ಸಚಿವ ಸುನಿಲ್ಕುಮಾರ್ ಮಾತನಾಡಿ ಮಂಗಳೂರು ಉರ್ವಾದಲ್ಲಿನ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಕಚೇರಿಗೆ ಶೀಘ್ರವಾಗಿ ಭೇಟಿ ನೀಡಿ ತುಳು ಭಾಷೆ ಮತ್ತು ಸಂಸ್ಕೃತಿಗಾಗಿ ನಡೆಸುತ್ತಿರುವ ಕಾರ್ಯಚಟುವಟಿಕೆಯನ್ನು ಖುದ್ಧಾಗಿ ಮನವರಿಸಿ ಕೊಳ್ಳುವೆ. ಜವಬ್ದಾರಿಯುತ ಸ್ಥಾನಮಾನವಾಗಿರುವ ಕಾರಣ ಮಾಹಿತಿಯನ್ನು ಪಡೆದುಕೊಂಡು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನು ಇನ್ನಷ್ಟು ಕಾರ್ಯ ಚಟುವಟಿಕೆಯ ಮೂಲಕ ನಡೆಸಲು ಕ್ರಮ ಕೈಗೊಳ್ಳುತ್ತೇನೆ ಎಂದರು.
ದಯಾನಂದ ಕತ್ತಲ್ಸಾರ್ ಮಾತನಾಡಿ, ತುಳುನಾಡಿನ ಶಾಸಕರೊಬ್ಬರು ಕನ್ನಡ ಮತ್ತು ಸಾಂಸ್ಕೃತಿಕ ಸಚಿವರ ಸ್ಥಾನಮಾನ ಪಡೆದಿರುವುದು ತುಳುವರಿಗೆ ಹೆಮ್ಮೆತರುವಂತದ್ದು, ನಿರೀಕ್ಷೆ ಹೆಚ್ಚಿದ್ದರೂ ಸಾಧನೆ ಮಾಡುವಲ್ಲಿ ವಿಫಲರಾಗುವುದಿಲ್ಲ ಎಂಬ ಆಶಯ ಇದೆ, ತುಳು ರಾಜ್ಯ ಭಾಷೆಗೆ ಮಾನ್ಯತೆ ಸಿಗುವಲ್ಲಿ ಪೂರ್ಣ ಭರವಸೆ ನಮ್ಮಲ್ಲಿದೆ. ತುಳು ಭವನದ ಪೂರ್ಣ ನಿರ್ಮಾಣಕ್ಕಿರುವ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನ ನಡೆಸಬೇಕು ಎಂದು ವಿನಂತಿಸಿಕೊಂಡರು.
