ಕೈಕಂಬ: ಮಂಗಳೂರು ತಾಲೂಕಿನ ಮಾರ್ಗದಂಗಡಿ ನೊನಾಲು ಎಂಬಲ್ಲಿ ಗುಡ್ಡ ಕುಸಿದು ವ್ಯಕ್ತಿಯೊಬ್ಬರು ಮಣ್ಣಿನ ಅಡಿಯಲ್ಲಿ ಬಿದ್ದ ಘಟನೆ ಭಾನುವಾರ ನಡೆದಿದೆ.
ಮಣ್ಣಿನಡಿಯಲ್ಲಿ ಸಿಲುಕಿದ್ದ ವ್ಯಕ್ತಿ ರಾಜೇಶ್ ಪೂಜಾರಿ (೨೮) ಎಂದು ಗುರುತಿಸಲಾಗಿದೆ. ನೊನಾಲು-ಕುಕ್ಕಟ್ಟೆ-ಗಂಜಿಮಠ ರಸ್ತೆಯಲ್ಲಿ ಗುಡ್ಡ ಕುಸಿಯದಂತೆ ತಡೆಗೋಡೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಮಧ್ಯಾಹ್ನ ೩ ಗಂಟೆ ಸುಮಾರಿಗೆ ರಾಜೇಶ್ ಮತ್ತು ಇನ್ನೋರ್ವ ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ಮೇಲಿಂದ ಮಣ್ಣು ಕುಸಿದು ಕೆಲಸಗಾರರ ಮೇಲೆ ಬಿದ್ದಿತ್ತು, 
ಈ ಸಂಧರ್ಭದಲ್ಲಿ ಈಗಾಗಲೇ ನಿರ್ಮಾಣವಾಗಿದ್ದ ತಡೆಗೋಡೆ ಮತ್ತು ಗುಡ್ಡದ ನಡುವಿನ ಸುಮಾರು ಒಂದೂವರೆ ಆಡಿ ಅಗಲದ ಅಂತರದೊಳಗೆ ರಾಜೇಶ್ ಸಿಲುಕಿದ್ದು ತಲೆ ಭಾಗ ಮಾತ್ರ ಮಣ್ಣಿನಿಂದ ಮೇಲಕ್ಕೆ ಕಾಣುತ್ತಿತ್ತು. ಘಟನೆಯ ಬಗ್ಗೆ ತಿಳಿಯುತ್ತಿದ್ದಂತೆ ಧಾವಿಸಿ ಬಂದ ಸ್ಥಳೀಯರು ಜೆಸಿಬಿಯ ಸಹಾಯದಿಂದ ಮಣ್ಣಿನೊಳಗೆ ಸಿಲುಕಿದ ವ್ಯಕ್ತಿಯನ್ನು ಎರಡು ಗಂಟೆಗಳ ಸತತ ಕಾರ್ಯಾಚರಣೆ ನಡೆಸಿ ರಾಜೇಶ್ ನನ್ನು ಮೇಲಕ್ಕೆತ್ತಲು ಯಶಸ್ವಿಯಾದರು.ತಕ್ಷಣ ರಾಜೇಶ್ ನನ್ನು ಕುಪ್ಪೆಪದವಿನ ಖಾಸಗಿ ಆಸ್ಪತೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ರಾಜೇಶ್ ಅವರು ಬಂಟ್ವಾಳ ತಾಲೂಕಿನ ಅರಳ ಗ್ರಾಮದ ನಿವಾಸಿ ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಗುಡ್ಡದ ಮೇಲಿನ ಮಣ್ಣು ಸಡಿಲಗೊಂಡು ಕುಸಿತವಾಗಿದ್ದು,ಆಗಾಗ ಮಳೆ ಸುರಿಯುತ್ತಿದ್ದುದರಿಂದ ಇಕ್ಕಟ್ಟಾದ ಸ್ಥಳದಲ್ಲಿ ರಕ್ಷಣಾ ಕೆಲಸ ಕಷ್ಟವಾಗಿತ್ತು. ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿತ್ತಾದರೂ ಅದು ಸ್ಥಳಕ್ಕೆ ತಲುಪುವ ಮುನ್ನವೇ ಸ್ಥಳೀಯರು ರಾಜೇಶ್ ನನ್ನು ಮೇಲಕ್ಕೆತ್ತಿ ರಕ್ಷಿಸಿದ್ದರು.
