Published On: Wed, Jun 16th, 2021

ಕೋವಿಡ್ ಸಂಧಿಗ್ದತೆಯಲ್ಲಿ ಜನಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಅಧಿಕಾರಿ ಪ್ರಮೀಳಾ ನಾಯಕ್.

ಕಾರ್ಕಳ: ಕೋವಿಡ್-19 ವೈರಸ್ ಇಡೀ ವಿಶ್ವವನ್ನೇ ತಲ್ಲಣಗೊಳಿಸಿದ ಸಾಂಕ್ರಾಮಿಕ. ಭಾರತ ಇದೀಗ ಕೋವಿಡ್ ನ 2ನೇ ಅಲೆಯನ್ನು ಎದುರಿಸುತ್ತಿದೆ.ಕೋವಿಡ್ ಅನ್ನು ಸಮರ್ಥವಾಗಿ ಎದುರಿಸುವಲ್ಲಿ ಸ್ಥಳೀಯ ಅಧಿಕಾರಿಗಳ ಪಾತ್ರವೂ ಪ್ರಮುಖವಾದುದು.ಈ ಸಂಕಷ್ಟದ ಪರಿಸ್ಥಿತಿಯಲ್ಲಿ ತಮ್ಮ ಪಂಚಾಯತ್ ಕೋವಿಡ್ ಮುಕ್ತ ಆಗಬೇಕು,ತಮ್ಮ ಪಂಚಾಯತ್ ವ್ಯಾಪ್ತಿಯ ಜನರಿಗೆ ತೊಂದರೆ ಆಗಬಾರದು ಎನ್ನುವ ನಿಟ್ಟಿನಲ್ಲಿ ಜನಪ್ರತಿನಿಧಿಗಳೊಂದಿಗೆ ಹಗಲಿರುಳು ಶ್ರಮಿಸುತ್ತಿರುವ ಅಧಿಕಾರಿ ಪಿಡಿಓ ಪ್ರಮೀಳಾ ನಾಯಕ್.d7eb4e28-4040-4e16-996d-7ef8c20967b2

ಪ್ರಸ್ತುತ ಕೋವಿಡ್ ನ ಈ ಸಂದರ್ಭದಲ್ಲಿ ಪ್ರಮೀಳಾ ನಾಯಕ್ ಅವರು ಯರ್ಲಪಾಡಿ ಹಾಗೂ ಕುಕ್ಕುಂದೂರು ಗ್ರಾ.ಪಂ ಗಳ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ತಮ್ಮ ಎರಡೂ ಪಂಚಾಯತ್ ನಲ್ಲಿ ಗ್ರಾ.ಪಂ ಸದಸ್ಯರೊಂದಿಗೆ ಆಶಾ ಕಾರ್ಯಕರ್ತೆಯರು,ಅಂಗನವಾಡಿ ಕಾರ್ಯಕರ್ತೆಯರನ್ನು ಜೋಡಿಸಿಕೊಂಡು ಟಾಸ್ಕ್ ಫೋರ್ಸ್ ಸಮಿತಿಯನ್ನು ರಚಿಸಿ ಕೋವಿಡ್ ಅನ್ನು ಎದುರಿಸುತ್ತಿದ್ದಾರೆ.278a1a8e-9251-4558-884f-0ee2c7bbb9f1

ಗ್ರಾಮ ಗ್ರಾಮಗಳಲ್ಲಿ ಕೋವಿಡ್ ಸೈನಿಕರನ್ನು ಗುರುತಿಸಿ ಜನರ ಸಂಕಷ್ಟಗಳಿಗೆ ಸ್ಪಂದನೆ ನೀಡಿ ಜವಾಬ್ದಾರಿಯನ್ನು ಹಂಚಿಕೊಂಡು ಕೆಲಸ ಮಾಡುತ್ತಿರುವರು.ಕೋವಿಡ್ ಪಾಸಿಟಿವ್ ಬಂದು ಐಸೋಲೇಶನ್ ನಲ್ಲಿರುವ ಸೋಂಕಿತರ ಮನೆಗಳಿಗೆ ಭೇಟಿ ನೀಡಿ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿ ಇರುವವರಿಗೆ ಟೆಸ್ಟ್ ಮಾಡಿಸಿ ಅವರಿಗೆ ಅಗತ್ಯ ವಸ್ತುಗಳು,ವೈದ್ಯಕೀಯ ನೆರವನ್ನು ನೀಡಿ ಕೋವಿಡ್ ಅಲ್ಲದ ಮನೆಗಳಿಗೆ ತುರ್ತು ಸಾಮಗ್ರಿ,ಆಹಾರ ಪಡಿತರ ಹಾಗೂ ಔಷಧಗಳನ್ನು ದಾನಿಗಳಿಂದ ಸಂಗ್ರಹಿಸಿ ವಿತರಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ.

ಕಾರ್ಕಳ ಶಾಸಕ ಸುನೀಲ್ ಕುಮಾರ್ ಅವರು ದಾನಿಗಳಿಂದ ನೀಡಿದ ಪಲ್ಸ್ ಆಕ್ಸಿಮೀಟರ್ ಅನ್ನು ಕೋವಿಡ್ ಸೋಂಕಿತರಿಗೆ ನೀಡಿ ಸಮರ್ಪಕವಾಗಿ ಬಳಕೆಯಾಗುವಂತೆ ಮಾಡಿರುತ್ತಾರೆ.ಯರ್ಲಪಾಡಿ ಗ್ರಾ.ಪಂ ಗ್ರಾಮೀಣ ಭಾಗದಲ್ಲಿದ್ದು ಕೋವಿಡ್ ಕಾಲದಲ್ಲಿ ಸಮಸ್ಯೆ ಆಗುತ್ತದೆ ಎನ್ನುವುದನ್ನು ಮನಗಂಡ ಪ್ರಮೀಳಾ ನಾಯಕ್ ದಾನಿಗಳನ್ನು ಸಂಪರ್ಕಿಸಿ 2 ಆಟೋರಿಕ್ಷಾದ ವ್ಯವಸ್ಥೆಯನ್ನು ಮಾಡಿದ್ದು,ಇದು ತುರ್ತು ಪರಿಸ್ಥಿತಿಯಲ್ಲಿ ಗ್ರಾಮಸ್ಥರಿಗೆ ಉಚಿತವಾಗಿ ಲಭ್ಯವಿದೆ. ವೈದ್ಯಕೀಯ ಸಿಬ್ಬಂದಿಗಳು ಕೂಡ ಸೋಂಕಿತರ ಮನೆಗೆ ಭೇಟಿ ನೀಡಲು ಇದನ್ನು ಬಳಸುತ್ತಿದ್ದಾರೆ ಇದರ ಸಂಪೂರ್ಣ ವೆಚ್ಚವನ್ನು ಪಂಚಾಯತ್ ಮೂಲಕ ದಾನಿಗಳು ಭರಿಸುತ್ತಿದ್ದಾರೆ.

ಪಿಡಿಓ ಅವರು ಸ್ವಚ್ಛತೆಗೆ ಆದ್ಯತೆ ನೀಡುತ್ತಿದ್ದು ಯರ್ಲಪಾಡಿ ಗ್ರಾ.ಪಂನಲ್ಲಿ ಈಗಲೂ ತ್ಯಾಜ್ಯ ವಿಲೇವಾರಿ ಘಟಕವು ಕಾರ್ಯನಿರ್ವಹಿಸುತ್ತಿದೆ ಹಾಗೂ ಮನೆ ಮನೆಗಳಿಂದ ತ್ಯಾಜ್ಯ ಸಂಗ್ರಹವಾಗುತ್ತಿದೆ.ಕಳೆದ ಬಾರಿ ಲಾಕ್ ಡೌನ್ ಸಂದರ್ಭದಲ್ಲಿ ಯರ್ಲಪಾಡಿ ಪಂಚಾಯತ್ ವ್ಯಾಪ್ತಿಯ ನ್ಯಾಯ ಬೆಲೆ ಅಂಗಡಿಯಲ್ಲಿ ಆಹಾರ ಪಡಿತರ ಸರಿಯಾಗಿ ವಿತರಣೆ ಮಾಡುತ್ತಿಲ್ಲ ಎಂದು ದೂರು ಬಂದಾಗ ಪಿಡಿಓ ಅವರು ಖುದ್ದು ಸ್ಥಳಕ್ಕೆ ಭೇಟಿ ನೀಡಿ ಆಹಾರ ಇಲಾಖೆಯ ಅಧಿಕಾರಿಗಳ ಮಾರ್ಗದರ್ಶನ ಪಡೆದು ಅಲ್ಲಿಯ ತಾಂತ್ರಿಕ ದೋಷ ದೂರ ಮಾಡಿ ವೃದ್ಧರಿಗೆ, ಮಹಿಳೆಯರಿಗೆ ಪ್ರಥಮ ಆದ್ಯತೆ ನೀಡಿ ಪಡಿತರವನ್ನು ತಾನೇ ವಿತರಿಸಿದ ಕಾರ್ಯ ಗಮನಾರ್ಹವಾದುದು.

ಕೋವಿಡ್ ಅಂಕಿ ಅಂಶಗಳ ಬಗ್ಗೆ ಯಾವುದೇ ಮುಚ್ಚು ಮರೆ ಮಾಡದೆ ತಾಲೂಕು ಆಡಳಿತಕ್ಕೆ ನಿಖರವಾದ ಮಾಹಿತಿಯನ್ನು ನೀಡಿ ಅತೀ ಹೆಚ್ಚು ಕೋವಿಡ್ ಪರೀಕ್ಷಾ ಶಿಬಿರಗಳನ್ನು ಮಾಡಿ ಕೋವಿಡ್ ಹರಡದಂತೆ ಕಡಿವಾಣ ಹಾಕಿರುವುದು ಹಾಗೂ ಲಸಿಕೆಯ ಬಗ್ಗೆ ಗ್ರಾಮಸ್ಥರಲ್ಲಿದ್ದ ಗೊಂದಲಗಳನ್ನು ದೂರ ಮಾಡಿ ಲಸಿಕೆ ಪಡೆಯುವಂತೆ ಪ್ರೇರೇಪಿಸಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಕೋವಿಡ್ ನಿರ್ವಹಣೆಯ ಬಗ್ಗೆ ಅವರಲ್ಲಿ ಕೇಳಿದಾಗ “ನಾನು ಟಾಸ್ಕ್ ಫೋರ್ಸ್ ಸಮಿತಿಗೆ ಹಂಚಿದ ಕಾರ್ಯವನ್ನು ಅವರು ಅಚ್ಚುಕಟ್ಟಾಗಿ ಮಾಡುತ್ತಿರುವುದು ನನಗೆ ಹೊರೆಯಾಗುತ್ತಿಲ್ಲ” ಎನ್ನುವರು ಪಿಡಿಓ ಪ್ರಮೀಳಾ ನಾಯಕ್.

ಸದಾ ಪಾದರಸದಂತೆ ಪಂಚಾಯತ್ ಸದಸ್ಯರೊಂದಿಗೆ ಮತ್ತು ಟಾಸ್ಕ್ ಫೋರ್ಸ್ ಸಮಿತಿಯೊಂದಿಗೆ ಬೆರೆತು ಕರ್ತವ್ಯವನ್ನು ನಿರ್ವಹಿಸುತ್ತಿರುವುದು ನಮಗೆ ಹುರುಪನ್ನು ನೀಡುತ್ತದೆ ಎನ್ನುವುದನ್ನು ಅಲ್ಲಿನ ಜನಪ್ರತಿನಿಧಿಗಳ ಮಾತುಗಳಿಂದಲೇ ಕೇಳಬೇಕು.

ಒಬ್ಬ ಮಹಿಳಾ ಅಧಿಕಾರಿಯಾಗಿ ಪ್ರಮೀಳಾ ನಾಯಕ್ ಅವರು ತಮ್ಮ ದಕ್ಷತೆ, ಪ್ರಾಮಾಣಿಕತೆ ಹಾಗೂ ಪಾರದರ್ಶಕ ಕಾರ್ಯವೈಖರಿಯ ಮೂಲಕ ಜನಸ್ನೇಹಿಯಾಗಿ 2 ಗ್ರಾ.ಪಂಗಳನ್ನು ನಿಭಾಯಿಸುತ್ತಿರುವ ಪರಿ ಇಂದಿನ ಯುವ ಅಧಿಕಾರಿ ವರ್ಗಕ್ಕೆ ಮಾದರಿಯೇ ಸರಿ.

✍️ ದೀಪಕ್ ಕಾಮತ್ ಎಳ್ಳಾರೆ

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter