ಮುಂಬಯಿ: ಮುಂಬಯಿಯಾದ್ಯಾಂತ ಕೆಲ ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು ಪರಿಣಾಮವಾಗಿ ಉಪನಗರದ ಮಲಾಡ್ ಪಶ್ಚಿಮದ ಮಲ್ವಾಣಿ ಇಲ್ಲಿನ ಅಬ್ದುಲ್ ಹಮೀದ್ ರಸ್ತೆಯ ನ್ಯೂ ಕಲೆಕ್ಟರ್ ಕಾಂಪೌಂಡ್‌ನಲ್ಲಿ ಕಳೆದ ಬುಧವಾರ ಮಧ್ಯರಾತ್ರಿ ನಾಲ್ಕು ಅಂತಸ್ತಿನ ವಾಸ್ತವ್ಯ ಕಟ್ಟಡವೊಂದು ಕುಸಿದುಬಿದ್ದು ಸುಮಾರು ೧೧ ಮಂದಿ ದಾರುಣವಾಗಿ ಮೃತಪಟ್ಟಿರುವ ಘಟನೆ ಸಂಭವಿಸಿದೆ.IMG-20210610-WA0148

ಒಟ್ಟು ೧೫ ಮಂದಿಯನ್ನು ರಕ್ಷಿಸಲಾಗಿದ್ದು ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಹತ್ತಿರದ ಬಿಡಿಬಿಎ ಆಸ್ಪತ್ರೆಗೆ ದಾಖಲಿಸಲಾಗಿದೆ.ಘಟನೆ ನಡೆದ ಕೂಡಲೇ ಹತ್ತಿರದಲ್ಲೇ ಇದ್ದ ಅಗ್ನಿಶಾಮಕ ದಳ, ರಕ್ಷಣಾ ಇಲಾಖೆ ಧಾವಿಸಿ ಕಾರ್ಯಚರಣೆ ನಡೆಸಿತು. ಸ್ಥಳೀಯ ಪೊಲೀಸರು ಮತ್ತು ಜನರ ಸಹಾಯದಿಂದ ಅವಶೇಷಗಳ ಅಡಿ ಸಿಲುಕಿದ್ದ ಮೃತದೇಹಗಳನ್ನು ಮೇಲಕ್ಕೆತ್ತಿದರು ಹಾಗೂ ಗಾಯಾಳುಗಳನ್ನು ಪತ್ತೆಹಚ್ಚಿ ಸ್ಥಳಿಯ ಮುನ್ಸಿಪಲ್ ಜನರಲ್ ಆಸ್ಪತ್ರೆಗೆ ಸಾಗಿಸಿದರು. ಸಂಜೆ ತನಕವೂ ಕಟ್ಟಡ ಅವಶೇಷಗಳ ಅಡಿಯಲ್ಲಿ ಸಿಲುಕಿರುವವರ ಶೋಧಕಾರ್ಯ ನಡೆಸಿದರು.IMG-20210610-WA0146 (1)

ಈ ಮನೆ ಮೊಹಮ್ಮದ್ ರಫೀಕ್ ಅವರಿಗೆ ಸೇರಿದ್ದು, ಅವರೂ ಕುಟುಂಬದ ಒಂಬತ್ತು ಮಂದಿಯನ್ನು ಕಳೆದುಕೊಂಡಿದ್ದಾರೆ. ಈ ದುರಂತ ಘಟನೆ ನಡೆದಾಗ ಅವರು ರಾತ್ರಿ ಹಾಲು ತರಲು ಹೋಗಿದ್ದರು. ಅವರ ಒಬ್ಬ ಮಗ ಮಾತ್ರ ಹೊರತುಪಡಿಸಿ ಉಳಿದವರು ಅಸುನೀಗಿದ್ದಾರೆ ಎನ್ನಲಾಗಿದೆ.ಘಟನಾ ಪ್ರದೇಶಕ್ಕೆ ಸ್ಥಾನೀಯ ಉತ್ತರ ಮುಂಬಯಿ (ಬೋರಿವಿಲಿ) ಲೋಕಸಭಾ ಕ್ಷೇತ್ರದ ಸಂಸದ ಗೋಪಾಲ್ ಸಿ.ಶೆಟ್ಟಿ, ಮಹಾರಾಷ್ಟ್ರ  ಸಚಿವ ಅಸ್ಲಂ ಶೇಖ್ ಭೇಟಿಯನ್ನಿತ್ತು ಸ್ಥಳ ಪರಿಶೀಲಿಸಿದ್ದು ಅಗಲಿದ ಚೇತನಗಳಿಗೆ ಸಂತಾಪ ಸೂಚಿಸಿ ಕುಟುಂಬಸ್ಥರಿಗೆ ಸಾಂತ್ವನ ತಿಳಿಸಿದರು.IMG-20210610-WA0136

ಅಂತೆಯೇ ಮೃತರ ಮರಣೋತ್ತರ ಪರೀಕ್ಷೆ ಶೀಘ್ರವಾಗಿ ನಡೆಸಿ ಪಾರ್ಥೀವ ಶರೀರಗಳನ್ನು ಅವರ ಪರಿವಾರಕ್ಕೆ ಹಸ್ತಾಂರಿಸುವಂತೆ ಮತ್ತು ಗಾಯಳುಗಳ ಚಿಕಿತ್ಸೆ ಬಗ್ಗೆಯೂ ಅತೀವ ಕಾಳಜಿವಹಿಸಿ ಚಿಕಿತ್ಸೆ ನೀಡುವಂತೆ ಆಸ್ಪತ್ರೆಯ ಮುಖ್ಯಸ್ಥರಿಗೆ ತಿಳಿಸಿದ್ದಾರೆ. ಸಂಸದರ ಜೊತೆ ಮಹಾರಾಷ್ಟ್ರ  ಸರಕಾರದ ವಿರೋಧ ಪಕ್ಷ ನೇತಾರ ಪ್ರವೀಣ್ ದಾರೆಕರ್, ಬಿಜೆಪಿ ಜಿಲ್ಲಾಧ್ಯಕ್ಷ ಗಣೇಶ್ ಖಣ್ಕರ್ ಮತ್ತಿತರರು ಉಪಸ್ಥಿತರಿದ್ದರು.

ಮೃತರ ಕುಟುಂಬಗಳಿಗೆ ಮಹಾರಾಷ್ಟ್ರ  ಸರ್ಕಾರ ತಲಾ ೫ ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ ಮತ್ತು ಗಾಯಗೊಂಡವರ ವೈದ್ಯಕೀಯ ಚಿಕಿತ್ಸೆಯನ್ನು ಸರ್ಕಾರ ಭರಿಸಲಿದೆ ಸಚಿವ ಅಸ್ಲಂ ಶೇಖ್ ಹೇಳಿದರು. ಧಾರಾಕಾರ ಮಳೆಯಿಂದಾಗಿಯೇ ಕಟ್ಟಡ ಕುಸಿದಿರುವ ಸಾಧ್ಯತೆ ಇದೆ. ನಗರದಾದ್ಯಂತದ ತಗ್ಗು ಪ್ರದೇಶಗಳು ಜಲಾವೃತ ಗೊಂಡಿದ್ದು ಈ ಕಟ್ಟಡವೂ ಕೂಡ ಇಥದ್ದೇ ಜಾಗದಲ್ಲಿದ್ದು ಘಟನೆಗೆ ಕಾರಣವಾಗಿದೆ ಎಂದು ಉಪ ಪೊಲೀಸ್ ಆಯುಕ್ತ ವಿಶಾಲ್ ಠಾಕೂರ್ ಮಾಹಿತಿ ನೀಡಿದ್ದಾರೆ.

ಈ ಘಟನೆಗೆ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಸಂತಾಪ ವ್ಯಕ್ತಪಡಿಸಿ ಮುಂಬಯಿನಲ್ಲಿ ಕಟ್ಟಡ ಕುಸಿತದಲ್ಲಿ ಅಮೂಲ್ಯವಾದ ಪ್ರಾಣಹಾನಿ ಸಂಭವಿಸಿದ್ದು ದುರದೃಷ್ಟಕರ. ಘಟನೆ ಬಗ್ಗೆ ಕೇಳಿದಾಗ ಆಘಾತ ಮತ್ತು ದುಃಖವಾಗಿದೆ. ಅಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಪರಿಣಾಮಕಾರಿ ಕ್ರಮಗಳನ್ನು ಜಾರಿಗೆ ತರಬೇಕು. ದುಃಖಿತ ಕುಟುಂಬಗಳಿಗೆ ಸಂತಾಪ ಸೂಚಿಸುವೆ ಎಂದು ಸಚಿವ ಹರ್ದೀಪ್ ಟ್ವೀಟ್ ಮಾಡಿದ್ದಾರೆ.

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್

By suddi9

Leave a Reply

Your email address will not be published. Required fields are marked *