ಕೈಕಂಬ: ಕುಲಶೇಖರದ ಗೋಸ್ಪೆಲ್ ಲೈಟ್ ಬ್ಯಾಪ್ಟಿಸ್ಟ್ ಚರ್ಚ್‍ನ ಬ್ಯಾಪಿಸ್ಟ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಧರ್ಮಗುರು(ಪಾಸ್ಟರ್) ದಿ. ಹ್ಯಾರಿ ಸ್ಮರಣಾರ್ಥ ಮಳಲಿ ಜೋಡುತಡಮೆ ಎಂಬಲ್ಲಿನ ಎಸ್‍ಟಿ/ಎಸ್‍ಸಿ ಹಾಗೂ ಇತರ 100ಕ್ಕೂ ಹೆಚ್ಚು ಕಡು ಬಡ ಕುಟುಂಬಗಳಿಗೆ ಶನಿವಾರ ಮಳಲಿಯಲ್ಲಿ ಆಹಾರ ಕಿಟ್ ವಿತರಿಸಲಾಯಿತು.
ದಿ. ಹ್ಯಾರಿಯವರ ಪುತ್ರಿ ಇಂಡಿಯಾ ರಸ್ಕಿನ್ಹಾ ಉಪಸ್ಥಿತಿಯಲ್ಲಿ ತಾಪಂ ಮಾಜಿ ಸದಸ್ಯ ಸುನಿಲ್ ಗಂಜಿಮಠ ಕಿಟ್ ವಿತರಿಸಿ ಮಾತನಾಡಿ, ಕೊರೋನಾ ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿ ಟ್ರಸ್ಟ್ ಉತ್ತಮ ಕೆಲಸ ಮಾಡುತ್ತಿದೆ. ಸಮಾಜಸೇವೆ ಕೈಗೊಳ್ಳಲು ಆಸಕ್ತಿ ಹೊಂದಿರುವ ಸಂಘ-ಸಂಸ್ಥೆಗಳು ಹಾಗೂ ಉಳ್ಳವರು ಸ್ಥಳೀಯ ಪಂಚಾಯತ್‍ಗಳಿಂದ ಬಡ ಕುಟುಂಬಗಳ ಮಾಹಿತಿ ಪಡೆದುಕೊಂಡು ನೆರವಿಗೆ ಮುಂದಾಗಬೇಕು ಎಂದರು.
ಸಮಾರಂಭದಲ್ಲಿ ಟ್ರಸ್ಟ್ ಸದಸ್ಯರಾದ ಧರ್ಮಗುರು ನವೀನ್ ರೆಬೆಲ್ಲೊ, ಧರ್ಮಗುರು ಗುರುರಾಜ, ಸಂತೋಷ್, ಅವಿನಾಶ್ ಹಾಗೂ ಗಾಯತ್ರಿ ಮತ್ತಿತರರು ಉಪಸ್ಥಿತರಿದ್ದರು.

