ಕೈಕಂಬ : ವಾಮಂಜೂರಿನ ವಿದ್ಯಾ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗುರುವಾರ ಧರ್ಮ ಜ್ಯೋತಿ ಸೋಸಿಯಲ್ ಸೆಂಟರ್ ಶಾಲಾ ಮಕ್ಕಳ ಪಾಲಕರಿಗಾಗಿ ಕೋವಿಡ್-೧೯ ವ್ಯಾಕ್ಸಿನ್ ಮಾಹಿತಿ ಶಿಬಿರ ಆಯೋಜಿಸಿತು. ವಾಮಂಜೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಚಿರಾಗ್ ಕೋವಿಡ್ ಲಸಿಕೆ ಬಗ್ಗೆ ಮಾಹಿತಿ ನೀಡುತ್ತ, ಇದು ರೋಗ ನಿರೋಧಕ ಶಕ್ತಿ(ಇಮ್ಯೂನಿಟಿ ಪವರ್) ಹೆಚ್ಚಿಸುವ ಲಸಿಕೆಯೇ ಹೊರತು ರೋಗ ತಡೆಗಟ್ಟುವ ಲಸಿಕೆಯಲ್ಲ. ಮೊದಲ ಹಂತದಲ್ಲಿ ಕೊರೋನಾ ವಾರಿರ‍್ಸ್ಗಳಿಗೆ ಲಸಿಕೆ ನೀಡಲಾದರೆ, ಪ್ರಸಕ್ತ ೬೦ ದಾಟಿದ ನಾಗರಿಕರಿಗೆ ಲಸಿಕೆ ನೀಡಲಾಗುತ್ತಿದೆ.
ಎಪ್ರಿಲ್ ಒಂದರಿಂದ ೪೫ ದಾಟಿದವರಿಗೆ ಕೋವಿಡ್ ವ್ಯಾಕ್ಸಿನ್ ನೀಡಲಾಗುತ್ತದೆ. ಜಿಲ್ಲೆಯಲ್ಲಿ ಈವರೆಗೆ ಸುಮಾರು ೫.೫ ಲಕ್ಷ ಮಂದಿಗೆ ಲಸಿಕೆ ನೀಡಲಾಗಿದೆ. ಎಲ್ಲೂ ಯಾವುದೇ ದೂರುಗಳು ಅಥವಾ ಅಡ್ಡ ಪರಿಣಾಮಗಳ ಕಂಡು ಬಂದಿಲ್ಲ. ಆದ್ದರಿಂದ ಭಯ ಬೇಡ, ವದಂತಿಗಳಿಗೆ ಕಿವಿಗೊಡಬೇಡಿ. ಬಿಪಿ, ಶುಗರ್, ಕಿಡ್ನಿ, ಲಿವರ್ ಅದೇನೇ ಕಾಯಿಲೆ ಇದ್ದವರೂ ಈ ಲಸಿಕೆ ತೆಗೆದುಕೊಳ್ಳಬಹುದು. ಸರ್ಕಾರಿ ಆಸ್ಪತ್ರೆ, ಪ್ರಾಥಮಿಕ ಕೇಂದ್ರಗಳಲ್ಲಿ ಲಸಿಕೆ ಉಚಿತವಾಗಿ ಲಭ್ಯವಿದ್ದು, ಖಾಸಗಿಯಲ್ಲಿ ಒಂದು ಡೋಸ್ ಲಸಿಕೆಗೆ ೨೫೦ ರೂ ನೀಡಬೇಕಾಗುತ್ತದೆ.
ಏಳೆಂಟು ತಿಂಗಳೊಳಗೆ ದೇಶದ ೮೦ ಕೋಟಿ ಮಂದಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದರು.ಲಸಿಕೆ ನೀಡಿಕೆಯಲ್ಲಿ, ಮುಂದಿನ ಏಳೆಂಟು ತಿಂಗಳಲ್ಲಿ ಶೇ ೮೦ರಷ್ಟು ಗುರಿ ಸಾಧಿಸಬೇಕಿದೆ. ತಪ್ಪಿದ್ದಲ್ಲಿ ಇನ್ನೂ ಕೆಲವು ವರ್ಷ ಮಾಸ್ಕ್ ಕಡ್ಡಾಯವಾಗಬಹುದು. ಸಾಮಾಜಿಕ ಅಂತರ ಇಟ್ಟುಕೊಂಡು, ಆಗಾಗ್ಗೆ ಸೋಪ್ ವಾಟರ್‌ನಿಂದ ಕೈತೊಳೆದುಕೊಳ್ಳಬೇಕು. ಕೋವಿಡ್ ವೈರಸ್ ವಿಷಯದಲ್ಲಿ ನಿರ್ಲಕ್ಷ್ಯ ಬೇಡ. ೬೦ ದಾಟಿದವರಿಗೆ ಲಸಿಕೆ ಪಡೆಯಲು ಪ್ರೇರೇಪಿಸಿ ಎಂದು ಡಾ. ಚಿರಾಗ್ ಹೇಳಿದರು.
ಮಾಹಿತಿ ಶಿಬಿರದಲ್ಲಿ ೨೦೦ಕ್ಕೂ ಅಧಿಕ ಮಕ್ಕಳ ಪಾಲಕರು ಪಾಲ್ಗೊಂಡಿದ್ದರು. ಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ಸಿಲ್ವಿಯಾ ಹಾಗೂ ಶಿಕ್ಷಕ ವರ್ಗ ಉಪಸ್ಥಿತರಿದ್ದರು. ದೈಹಿಕ ಶಿಕ್ಷಕ ಪ್ರದೀಪ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಚಂಚಲಾಕ್ಷಿ ವಂದಿಸಿದರು.
