ಮೂಡುಬಿದಿರೆ: ಪುರಸಭೆ ವ್ಯಾಪ್ತಿಯ ಕಲ್ಲಬೆಟ್ಟು ಸಹಕಾರಿ ಸಂಘದ ಅಧೀನದಲ್ಲಿರುವ ನ್ಯಾಯಬೆಲೆ ಅಂಗಡಿಗಳಿಗೆ ಸರ್ಕಾರದಿಂದ ಕಳಪೆ ಗುಣಮಟ್ಟದ ಗೋಧಿ ಪೂರೈಕೆಯಾಗಿದ್ದು, ಬುಧವಾರ ಮೂಡುಬಿದಿರೆ ತಹಸೀಲ್ದಾರ್ ಪುಟ್ಟರಾಜು ಅವರು ಕಲ್ಲಬೆಟ್ಟುವಿನಲ್ಲಿರುವ ಸಂಘದ ಪ್ರಧಾನ ಶಾಖೆಯಲ್ಲಿರುವ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ, ಪರಿಶೀಲಿಸಿದರು.
ಕಲ್ಲಬೆಟ್ಟು ಸಹಕಾರಿಯ ವ್ಯಾಪ್ತಿಯಲ್ಲಿ ಕಲ್ಲಬೆಟ್ಟು, ಕರಿಂಜೆ, ಶಿರ್ತಾಡಿ, ಪಡುಕೊಣಾಜೆ, ಮೂಡುಕೊಣಾಜೆ ಗ್ರಾಮಗಳ 1700 ಗ್ರಾಹಕರಿದ್ದು, ಈ ಬಾರಿ 2 ಕ್ವಿಂಟಲ್‍ನಷ್ಟು ಕಳಪೆ ಗೋಧಿ ಪೂರೈಕೆಯಾಗಿದೆ ಎಂದು ಸಹಕಾರಿ ಉಪಾಧ್ಯಕ್ಷ ಆಲ್ವಿನ್ ಮೆನೇಜಸ್ ತಹಸೀಲ್ದಾರ್ ಗಮನಕ್ಕೆ ತಂದರು.
ಮಾಧ್ಯಮದವರ ಜೊತೆ ಮಾತನಾಡಿದ ತಹಸೀಲ್ದಾರ್, ಕಳಪೆ ಗುಣಮಟ್ಟದ ಗೋಧಿ ಪೂರೈಕೆಯಾಗಿರುವುದು ನಿಜ. ಇದನ್ನು ಹಿಂದೆ ಕಳುಹಿಸಿ, ಗುಣಮಟ್ಟದ ಗೋಧಿ ಪೂರೈಕೆಗಾಗಿ ವ್ಯವಸ್ಥೆ ಮಾಡುತ್ತೇವೆ ಎಂದು ತಿಳಿಸಿದರು.ಸಹಕಾರಿಯ ನಿರ್ದೇಶಕ ಸುರೇಶ್ ಕೋಟ್ಯಾನ್, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅನಿತಾ ಉಪಸ್ಥಿತರಿದ್ದರು.
