ಮೂಡುಬಿದಿರೆ: ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಒಂಟಿ ಮಹಿಳೆ ಹತ್ಯೆ ಪ್ರಕರಣದ ಆರೋಪಿಯನ್ನು ಮಡಿಕೇರಿ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಮೂಲತಃ ಮೂಡುಬಿದಿರೆ ತಾಲೂಕಿನ ಹೊಸಬೆಟ್ಟು ಗ್ರಾಮದ ಅನಿಲ್ ಬಂಧಿತ ಆರೋಪಿಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕೆ.ನಿಡುಗಣೆ ಗ್ರಾಮದ ಮಹೀಂದ್ರಾ ರೆಸಾರ್ಟ್ ಸಮೀಪ ಸ್ವಂತ ಮನೆಯಲ್ಲಿ ವಾಸವಿದ್ದ ಸುಮಾರು 70 ವರ್ಷದ ಒಂಟಿ ಮಹಿಳೆ ಲಲಿತಾ ಅವರನ್ನು ಕೊಲೆ ಮಾಡಿ ಚಿನ್ನಾಭರಣಗಳನ್ನು ದೋಚಲಾಗಿತ್ತು. ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬಳಿಕ ವಿವಿಧ ಆಯಾಮಗಳಲ್ಲಿ ವಿಚಾರಣೆ ನಡೆಸಿದ ಇನ್ ಸ್ಪೆಕ್ಟರ್ ರವಿಕಿರಣ್, ಡಿಸಿಐಬಿ ಹಾಗೂ ಮಡಿಕೇರಿ ಪೊಲೀಸರು ಆರೋಪಿ ಅನಿಲ್‌ನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿ ತಪ್ಪು ಒಪ್ಪಿಕೊಂಡಿದ್ದು, ಲಲಿತಾ ಅವರ ತಲೆಗೆ ಕಬ್ಬಿಣದ ರಾಡಿನಿಂದ ಹೊಡೆದು ಕೊಲೆ ಮಾಡಿ ಚಿನ್ನಾಭರಣ ಹಾಗೂ ನಗದನ್ನು ದೋಚಿರುವುದು ತಿಳಿಸಿದ್ದಾನೆ.
ಆರೋಪಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರನಾಗಿದ್ದು, ಈತ ಮೂಡುಬಿದಿರೆ ಹಾಗೂ ಮಂಗಳೂರಿನಲ್ಲಿ ಮಾರಾಟ ಮಾಡಿದ ಸುಮಾರು 2.80 ಲಕ್ಷ ಮೌಲ್ಯದ 72ಗ್ರಾಂ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ. ಜೊತೆಗೆ ನಗದು ಹಾಗೂ ಕೃತ್ಯಕ್ಕೆ ಬಳಸಿದ ಆಯುಧ ಮತ್ತು ಮೋಟಾರ್ ಸೈಕಲ್ ವಶಪಡಿಸಿಕೊಳ್ಳಲಾಗಿದೆ.
