ಬಂಟ್ವಾಳ:ಇಲ್ಲಿನ ಬ್ರಹ್ಮರಕೊಟ್ಲು ರಾಷ್ಟ್ರೀಯ ಹೆದ್ದಾರಿ ಟೋಲ್ ಪ್ಲಾಝಾ ಬಳಿ ಸರ್ವೀಸ್ ರಸ್ತೆಯಲ್ಲಿ ದಿಢೀರನೆ ಕಬ್ಬಿಣದ ಬೇಲಿ ನಿರ್ಮಿಸಿ ಸಣ್ಣ ಸರಕು ಸಾಗಣೆ ವಾಹನ ನಿರ್ಬಂಧಿಸಿರುವುದನ್ನು ವಿರೋಧಿಸಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ ತೆರವುಗೊಳಿಸಿದ ಘಟನೆ ಮಂಗಳವಾರ ನಡೆದಿದೆ.
ಈ ರಸ್ತೆಯಲ್ಲಿ ಪಿಕಪ್ ಮತ್ತಿತರ ಲಘು ವಾಹನಗಳು ಸರಕು ಸಾಮಾಗ್ರಿ ಸಾಗಾಟಕ್ಕೆ ಸಂಚರಿಸುತ್ತಿರುವುದನ್ನು ಕಂಡ ಟೋಲ್ ಸಿಬ್ಬಂದಿಗಳು ಏಕಾಯೇಕಿ ತಡೆಬೇಲಿ ಅಳವಡಿಸಿದ್ದಾರೆ.ಈಗಾಗಲೇ ಅವೈಜ್ಞಾನಿಕ ಟೋಲ್ ಪ್ಲಾಝಾ ಮತ್ತು ಇಲ್ಲಿನ ಸರ್ವಿಸ್ ರಸ್ತೆ ಹಾಗೂ ಮೂಲಭೂತ ಸೌಕರ್ಯ ಕೊರತೆ ಬಗ್ಗೆ ನಾಗರಿಕರಿಂದ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದು, ಹಲವಾರು ಬಾರಿ ವಿವಿಧ ಸಂಘಟನೆಗಳು ಪ್ರತಿಭಟನೆಯನ್ನೂ ನಡೆಸಿದೆ. ಈ ನಡುವೆ ಸರ್ವಿಸ್ ರಸ್ತೆಯಲ್ಲಿ ತಡೆಬೇರಿ ನಿರ್ಮಿಸಿ ಮತ್ತಷ್ಟು ಅಪಘಾತಕ್ಕೆ ಕಾರಣವಾಗುತ್ತದೆ ಎಂದು ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದರು.
ಈ ಟೋಲ್ ಪ್ಲಾಝಾ ಅವೈಜ್ಞಾನಿಕವಾಗಿದ್ದು, ಇದರ ಅವಧಿ ಮುಗಿದರೂ ಹಗಲು ದರೋಡೆ ಮಾಡುವ ಕೇಂದ್ರವಾಗಿ ರೂಪುಗೊಂಡಿದೆ ಎಂದು ಸಮಾನ ಮನಸ್ಕರ ಸಂಘಟನೆಗಳ ಸಂಚಾಲಕ ಪ್ರಭಾಕರ ದೈವಗುಡ್ಡೆ ಪ್ರತಿಕ್ರಿಯಿಸಿದ್ದಾರೆ.ಸುಂಕ ತಪ್ಪಿಸಿ ಪರ್ಯಾಯ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಂದ ಟೋಲ್ ಸಂಗ್ರಹಿಸಲು ಅವಕಾಶ ಇದ್ದರೂ ಅದಕ್ಕೆ ಕೆಲವೊಂದು ನಿಯಮಾವಳಿಯೂ ಇದೆ. ಈ ತಡೆಬೇಲಿ ಬಗ್ಗೆ ಪರಿಶೀಲನೆ ನಡೆಸಿ ಅವೈಜ್ಞಾನಿಕವಾಗಿದ್ದರೆ ತೆರವುಗೊಳಿಸಿ ಸೂಕ್ತ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.
