ಮಂಗಳೂರು : ಮಂಗಳೂರು ಪ್ರೆಸ್ ಕ್ಲಬ್, ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಪತ್ರಿಕಾ ಭವನ ಟ್ರಸ್ಟ್ ವತಿಯಿಂದ ಕಳೆದ ಭಾನುವಾರ (ಮಾ.೨೧) ನಡೆಸಲ್ಪಟ್ಟ ಪ್ರೆಸ್ ಕ್ಲಬ್ ದಿನಾಚರಣೆಯಲ್ಲಿ ಅಂತರಾಷ್ಟ್ರೀಯ ಪ್ರಸಿದ್ಧಿಯ ಕನ್ನಡಿಗ ಪ್ರಸಿದ್ದ ಜಾದೂಗಾರ ಕುದ್ರೋಳಿ ಗಣೇಶ್ ತನ್ನ ಕೈಚಳಕದಿಂದ ವಿಶೇಷ ಜಾದೂ ನಡೆಸಿ ಉಪಸ್ಥಿತ ಕರ್ನಾಟಕ ಸರಕಾರದ ಪ್ರವಾಸೋದ್ಯಮ ಸಚಿವ ಸಿ.ಪಿ ಯೋಗೇಶ್ವರ್ ಇಸ್ಪೀಟ್ ಪ್ಯಾಕ್‌ನಿಂದ ಆರಿಸಿದ ಎಲೆಯನ್ನು ಸಚಿವರರ ಕೈಯಲ್ಲೇ ಪ್ರತ್ಯಕ್ಷ ಮಾಡಿಸಿ ಅಚ್ಚರಿ ಗೊಳಿಸಿದರು.
ಜೊತೆಗೆ ಸುಪ್ತ ಮನಸ್ಸಿನ ಆಲೋಚನೆಗಳನ್ನು ಜಾದೂವಿನಿಂದ ಓದುವ ವಿವಿಧ ತಂತ್ರಗಳಿಂದ ನೆರೆದಿದ್ದ ಪತ್ರಕರ್ತರು ಹಾಗೂ ಅವರ ಕುಟುಂಬದವರನ್ನು ಕುದ್ರೋಳಿ ಗಣೇಶ್ ಬೆರಗುಗೊಳಿಸಿದರು. ಜಾದೂವಿನ ತಂತ್ರಗಾರಿಕೆಯ ಜೊತೆ ಕೊಳಲಿನ ನಾದವನ್ನು ಬೆಸೆದು ನೆರೆದಿದ್ದವರಿಗೆ ರಂಜನೆ ನೀಡಿದರು.
ಇದೇ ಸಂದರ್ಭದಲ್ಲಿ ಈ ಬಾರಿಯ ಪ್ರೆಸ್ ಕ್ಲಬ್ ಪ್ರಶಸ್ತಿಯ ಆಯ್ಕೆ ಸಮಿತಿಯ ತೀರ್ಪುಗಾರರಾಗಿಯೂ ಕೊಡುಗೆ ನೀಡಿದ ಕುದ್ರೋಳಿ ಗಣೇಶ್ ಇವರನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ| ಎಂ.ಮೋಹನ್ ಆಳ್ವ ಅವರು ಸನ್ಮಾನನಿಸಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಅನ್ನು ಮಂಗಳೂರು, ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ , ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಕೆ. ಆನಂದ ಶೆಟ್ಟಿ ಸೇರಿದಂತೆ ಮೂರೂ ಸಂಸ್ಥೆಗಳ ಇತರ ಪದಾಧಿಕಾರಿಗಳು, ಸದಸ್ಯ ಪತ್ರಕರ್ತರನೇಕರು ಉಪಸ್ಥಿತರಿದ್ದರು.


