ಮೂಡುಬಿದಿರೆ: ನ್ಯಾಷನಲ್ ಇನ್ಸಿಟ್ಯೂಟ್ ಆಫ್ ನ್ಯಾಚುರೋಪತಿ, ಆಯುಷ್ ಮಂತ್ರಾಲಯ ಮತ್ತು ಆಳ್ವಾಸ್ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜು ಮತ್ತು ಆಸ್ಪತ್ರೆ ಇವುಗಳ ಸಹಯೋಗದಲ್ಲಿ ಬೃಹತ್ ಪ್ರಕೃತಿ ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲೆ ಡಾ. ವನಿತಾ ಶೆಟ್ಟಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಮಾರ್ಚ್ 21ರಂದು ಮಿಜಾರು ಆಳ್ವಾಸ್ ಆನಂದಮಯ ಆರೋಗ್ಯಧಾಮ, ಮಾರ್ಚ್ 24ರಂದು ಬಜ್ಪೆ ಪಂಚಾಯಿತಿ ಸಭಾಭವನದಲ್ಲಿ ಉಚಿತ ಶಿಬಿರವನ್ನು ಆಯೋಜಿಸಲಾಗಿದೆ. ಈ ಶಿಬಿರದಲ್ಲಿ ಮಾಲೀಶು ಚಿಕಿತ್ಸೆ, ರಿಪ್ಲೆಕ್ಸಾಲಜಿ ಅಕ್ಯುಫ್ರೆಶರ್, ಯೋಗ ಚಿಕಿತ್ಸೆ, ಪಥ್ಯಾಹಾರ ಚಿಕಿತ್ಸೆ, ಜಲಚಿಕಿತ್ಸೆ, ಕಪ್ಪಿಂಗ್ ಚಿಕಿತ್ಸೆ ನೀಡಲಾಗುವುದು. ಶಿಬಿರಾರ್ಥಿಗಳಿಗೆ ಆರೋಗ್ಯ ವರ್ಧಕ ಕಿಟ್ ವಿತರಿಸಲಾಗುವುದು. ಕಿಟ್ನಲ್ಲಿ ವಿಟಮಿನ್ ಹೇರಳವಾಗಿರುವ ಮುಸುಂಬಿ ಹಣ್ಣು, ನೆಲ್ಲಿಕಾಯಿ ಜೊತೆಗೆ ಮಾಸ್ಕ್, ನೀಲಗಿರಿ ಎಣ್ಣೆ, ಗಾಂಧೀಜಿಯವರಿಗಿದ್ದ ಪ್ರಕೃತಿ ಚಿಕಿತ್ಸೆಯ ಒಲವು ಹಾಗೂ ಅನುಸರಿಸಿದ ವಿಧಾನಗಳನ್ನು ವಿವರಿಸುವ ಕಿರು ಪುಸ್ತಕವನ್ನು ಹೊಂದಿದೆ.ರೋಗ ನಿರೋಧಕ ಆಹಾರಾಭ್ಯಾಸದ ಬಗ್ಗೆ ಜಾಗೃತಿ ಮೂಡಿಸಲು ಹಣ್ಣು ತರಕಾರಿಗಳ ವಿವಿಧ ಪ್ರಕಾರಗಳ ಪ್ರದರ್ಶನವೂ ನಡೆಯಲಿದೆ ಎದು ಅವರು ತಿಳಿಸಿದರು.
