ಮೂಡುಬಿದಿರೆ: ದರೆಗುಡ್ಡೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಿಲೇ ಘಟಕ ನಿರ್ಮಿಸಲು ಹಾಗೂ ಹೊಸ ಮನೆ ನಿವೇಶನಕ್ಕೆ ಜಾಗವಿಲ್ಲದೆ ಗ್ರಾಮಸ್ಥರಿಗೆ ತೊಂದರೆಯಾಗಿದ್ದ 2 ಅತೀ ದೊಡ್ಡ ಸಮಸ್ಯೆಗಳಿಗೆ ತಹಸೀಲ್ದಾರರ ಗ್ರಾಮ ವಾಸ್ತವ್ಯದಲ್ಲಿ ತಹಸೀಲ್ದಾರ್ ಪುಟ್ಟರಾಜು ಅವರು ಜಾಗವನ್ನು ಗುರುತಿಸುವ ಮೂಲಕ ಪರಿಹಾರ ಸಿಕ್ಕಿದೆ.a65210d6-53ee-4aff-bdc2-2c04b77ba5bc

ಕಂದಾಯ ಇಲಾಖೆಯ ವತಿಯಿಂದ ಶನಿವಾರ ದರೆಗುಡ್ಡೆ ಪಂಚಾಯಿತಿ ವ್ಯಾಪ್ತಿಯ ದರೆಗುಡ್ಡೆ, ಪಣಪಿಲ, ಕೆಲ್ಲಪುತ್ತಿಗೆ ಗ್ರಾಮದಲ್ಲಿ ಕಂದಾಯ ಇಲಾಖೆಗೆ ಸಂಬಂಧಪಟ್ಟ ಸಮಸ್ಯೆಗಳಿಗೆ ಹಾಗೂ ಅರ್ಜಿ ವಿಲೇವಾರಿ ಮಾಡಲು ತಹಸೀಲ್ದಾರರು ಗ್ರಾಮ ವಾಸ್ತವ್ಯ ಹೂಡಿದ್ದು ಈ ಸಂದರ್ಭದಲ್ಲಿ ಗ್ರಾಮಸ್ಥರು ಘನತ್ಯಾಜ್ಯ ವಿಲೇ ಘಟಕ ಮಾಡಲು ಜಾಗವಿಲ್ಲ ಹಾಗೂ ಕಳೆದ ಹಲವು ವರ್ಷಗಳಿಂದ ಮನೆ ನಿವೇಶನ ನೀಡುತ್ತಿಲ್ಲವೆಂದು ಬೇಡಿಕೆ ಸಲ್ಲಿಸಿದ್ದರು. ಈ ಬಗ್ಗೆ ಗ್ರಾಮಕರಣಿಕರ ಬಳಿ ಮಾತನಾಡಿದ ತಹಶಿಲ್ದಾರ್ ಅವರು ಸ್ಮಶಾನಕ್ಕೆ ಒದಗಿಸಲಾಗಿರುವ 2.27 ಎಕರೆ ಜಾಗವನ್ನು ಪರಿಶೀಲನೆ ನಡೆಸಿ ಈ ಜಾಗದಲ್ಲಿ 50 ಸೆಂಟ್ಸ್ ಜಾಗವನ್ನು ಘನತ್ಯಾಜ್ಯ ವಿಲೇ ಘಟಕ ನಿರ್ಮಾಣಕ್ಕೆ ಮೀಸಲಿಡುವಂತೆ ಸೂಚಿಸಿದರು. ಹಾಗೂ ಮನೆ ನಿವೇಶನಕ್ಕೆ ಕೊಟ್ರೊಟ್ಟು ಬಳಿ 2 ಎಕರೆ ಜಾಗವನ್ನು ಗುರುತಿಸಲಾಯಿತು.

ಪೌತಿ ಖಾತಾ ವಾರೀಸು ಆಂದೋಲನದಲ್ಲಿ 16, ಜಾತಿ ಆದಾಯ 10, ಅತೀ ಸಣ್ಣ ರೈತರ ಹಿಡುವಳಿ ಅರ್ಜಿ-2, 94ಸಿಯಲ್ಲಿ 1, ಹೊಸ ಪೆನ್ಷನ್‍ಗಾಗಿ-12, ಪೆನ್ಷನ್ ಬಂದಿಲ್ಲವೆಂದು ನೀಡಿರುವ 3 ಅರ್ಜಿಗಳನ್ನು ತಹಶೀಲ್ದಾರ್‍ರು ಸ್ವೀಕರಿಸಿದರು. ಹಾಗೂ 8 ಮಂದಿಗೆ ಪೆನ್ಷನ್ ಪತ್ರವನ್ನು ಸ್ಥಳದಲ್ಲೇ ಮಂಜೂರು ಮಾಡಿದರು.ಕಂದಾಯ, ಅರಣ್ಯ, ತೋಟಗಾರಿಕೆ ಹಾಗೂ ಪಶು ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಯಲ್ಲಿ ಜನರಿಗೆ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.

ಗ್ರಾಪಂ ಅಧ್ಯಕ್ಷೆ ತುಳಸಿ ಮೂಲ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ ಗ್ರಾಮದ ಜನರಿಗೆ ಸಮಸ್ಯೆಗಳಿಗೆ ಸ್ಪಂದಿಸಲು ಮತ್ತು ಪರಿಹಾರ ಸೂಚಿಸಲು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅಲ್ಲದೆ ತಮ್ಮ ಪಂಚಾಯಿತಿಯಲ್ಲಿ ಉದ್ಯೋಗ ಖಾತರಿ ಯೋಜನೆಯನ್ನು ಸಮರ್ಪಕವಾಗಿ ಕಾರ್ಯಗತಗೊಳಿಸಿದಕ್ಕಾಗಿ ಸಮಗ್ರ ಆಡಳಿತ ಪ್ರಶಸ್ತಿ ಬಂದಿದೆ ಎಂದು ತಿಳಿಸಿ ಸಂತಸ ವ್ಯಕ್ತಪಡಿಸಿದರು.

ಸದಸ್ಯರಾದ ಮುನಿರಾಜ ಹೆಗ್ಡೆ, ದೀಕ್ಷಿತ್ ಪಣಪಿಲ, ಶಶಿಕಲಾ ದರೆಗುಡ್ಡೆ, ನಳಿನಿ, ಉಪ ತಹಶೀಲ್ದಾರ್ ವಿಶ್ವನಾಥ, ಪಿಡಿಒ ರಮೇಶ್ ರಾಢೋಡ್, ಗ್ರಾಮಕರಣಿಕ ಮಂಜುನಾಥ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

By suddi9

Leave a Reply

Your email address will not be published. Required fields are marked *