ಮೂಡುಬಿದಿರೆ : ಸಾಂಕ್ರಾಮಿಕ ರೋಗ ಕೊರೋನಾ ಕಾರಣದಿಂದ 2020ರಲ್ಲಿ ಸ್ಥಗಿತಗೊಂಡಿದ್ದ ಶೈಕ್ಷಣಿಕ ವರ್ಷವು ಇದೀಗ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ 2021ರ ಮೊದಲ ದಿನ ಆರಂಭಗೊಂಡಿದ್ದು ಶಿಕ್ಷಣ ಸಂಸ್ಥೆಗಳಲ್ಲಿ ಬಾಳೆಗಿಡ, ತಳಿರುತೋರಣ ಕಟ್ಟಿ, ಬ್ಯಾಂಡುವಾದನದೊಂದಿಗೆ ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳಲಾಯಿತು.

ಕೋವಿಡ್ ಕ್ರಮಗಳನ್ನು ಪಾಲಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಈ ಮೊದಲೇ ಸೂಚಿಸಿದ್ದರಿಂದ ಮಾಸ್ಕ್ ಧರಿಸಿಕೊಂಡು ಬಂದಿದ್ದ ವಿದ್ಯಾರ್ಥಿಗಳನ್ನು ಥರ್ಮಲ್ ಸ್ಕ್ಯಾನಿಂಗ್ಗೊಳಪಡಿಸಿ, ಸ್ಯಾನಿಟೈಸರ್ ಬಳಸಿ ಬರಮಾಡಿಕೊಳ್ಳಲಾಯಿತು. ವೈಯಕ್ತಿಕ ಅಂತರ ಕಾಪಾಡಿಕೊಂಡು ತರಗತಿಗಳನ್ನು ನಡೆಸಲಾಯಿತು. ಎಲ್ಲ ಶಾಲೆಗಳಲ್ಲಿ ಐಸೋಲೇಶನ್ ಕೊಠಡಿಯ ವ್ಯವಸ್ಥೆ ಮಾಡಲಾಗಿತ್ತು. ಶೌಚಾಲಯಗಳಲ್ಲಿ , ವಾಶ್ರೂಮ್ಗಳಲ್ಲಿ ಸ್ಯಾನಿಟೈಸರ್, ಸಾಬೂನು ಇರಿಸಲಾಗಿತ್ತು.
ಶಾಲಾ ಆವರಣಗಳಲ್ಲಿ ಕೊರೊನಾ ಪ್ರತಿಬಂಧಕ ಕ್ರಮಗಳನ್ನು ಅನುಸರಿಸುವ ಬಗ್ಗೆ ಸೂಚನೆ, ವಿನಂತಿ ಸಹಿತ ಮಾಹಿತಿಗಳಿರುವ ಫಲಕಗಳನ್ನು ಪ್ರದರ್ಶಿಸಲಾಗಿತ್ತು. ಹೆತ್ತವರ ಒಪ್ಪಿಗೆಯನ್ನು ಮೊದಲೇ ಸಭೆ ನಡೆಸಿ, ಪಡೆದುಕೊಳ್ಳಲಾಗಿತ್ತು.
151 ವರ್ಷಗಳ ಇತಿಹಾಸವಿರುವ ಮೂಡುಬಿದಿರೆ ಮೈನ್ ಶಾಲೆಯಲ್ಲಿ ಶುಕ್ರವಾರ ಬೆಳಿಗ್ಗೆ 10ರಿಂದ 12.30ರವರೆಗೆ 7ನೇ ತರಗತಿಯನ್ನು , ಅಪರಾಹ್ನ 6ನೇ ತರಗತಿಯನ್ನು ನಡೆಸಲಾಯಿತು.

ಮೂಡುಬಿದಿರೆ ಗಾಂಧಿನಗರ ಶಾಲೆಯಲ್ಲಿ ತಳಿರುತೋರಣ,ಸೋಂಕುಮುಕ್ತ ಶಾಲೆ ಎಂಬ ಸ್ವಾಗತ ಫಲಕದೊಂದಿಗೆ ಶಿಕ್ಷಕಿಯರು ವಿದ್ಯಾರ್ಥಿಗಳಿಗೆ ಆರತಿ ಬೆಳಗಿ, ಬ್ಯಾಂಡ್ ನುಡಿಸಿಕೊಂಡು ಶಾಲೆಯೊಳಗೆ ಬರಮಾಡಿಕೊಂಡರು. ಥರ್ಮಲ್ ಸ್ಕ್ಯಾನಿಂಗ್, ಸ್ಯಾನಿಟೈಸೆಶನ್ ಮೊದಲಾದ ಕ್ರಮಗಳನ್ನು ಪಾಲಿಸಿಕೊಂಡು ವೈಯಕ್ತಿಕ ಅಂತರ ಕಾಪಾಡಿಕೊಂಡು ಆರನೇ ಮತ್ತು ಏಳನೇ ತರಗತಿಗಳನ್ನು ನಡೆಸಲಾಯಿತು.
ಜೈನ ಪ್ರೌಢಶಾಲೆಯಲ್ಲಿ ಬೆಳಗಿನ ಅವಧಿಯಲ್ಲಿ 10ನೇ, ಅಪರಾಹ್ನ 9ನೇ ತರಗತಿಗಳನ್ನು ನಡೆಸಲಾಯಿತು; ಶೇ.78ರಷ್ಟು ಹಾಜರಾತಿ ಇತ್ತು ಎಂದು ಮುಖ್ಯ ಶಿಕ್ಷಕ ಮುನಿರಾಜ ರೆಂಜಾಳ ತಿಳಿಸಿದ್ದಾರೆ.

ಬಾಬೂರಾಜೇಂದ್ರ ಪ್ರಸಾದ್ ಪ್ರೌಢಶಾಲೆಯಲ್ಲಿ ವರ್ಣಮಯ ಬಲೂನುಗಳ ಸ್ವಾಗತ ಗೋಪುರ ನಿರ್ಮಿಸಿ ಶಿಕ್ಷಕರು ವಿದ್ಯಾರ್ಥಿಗಳನ್ನು ಸ್ವಾಗತಿಸಿದರು. 9ನೇ ತರಗತಿಯಲ್ಲಿ ಶೇ. 35, 10ನೇ ತರಗತಿಯಲ್ಲಿ ಶೇ. 45ರಷ್ಟು ವಿದ್ಯಾರ್ಥಿಗಳ ಹಾಜರಾತಿ ಇತ್ತು. ಹೆಚ್ಚಿನವರು ಸರಕಾರಿ ಹಾಸ್ಟೆಲ್ವಾಸಿಗಳಾಗಿರುವ ಕಾರಣ ಅವರೆಲ್ಲ ಊರಿನಿಂದ ಬಂದ ಬಳಿಕ ಹಾಜರಾತಿಯಲ್ಲಿ ಹೆಚ್ಚಳವಾಗಬಹುದೆಂದು ಮುಖ್ಯೋಪಾಧ್ಯಾಯಿನಿ ಪದ್ಮಜಾ ತಿಳಿಸಿದ್ದಾರೆ.

By Suddi9 Author

Suddi9

Leave a Reply

Your email address will not be published. Required fields are marked *