ಬಂಟ್ವಾಳ: ಮಂಗಳೂರಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಂಟ್ವಾಳ ತಾಲೂಕಿನ ಮೂವರು ಸಾವನ್ನಪ್ಪಿದ್ದಾರೆ. ನ್ಯೂಮೋನಿಯಾದಿಂದ ಬಳಲುತ್ತಿದ್ದ 73 ವರ್ಷದ ಪುರುಷ, ಕಿಡ್ನಿ ತೊಂದರೆ ಮತ್ತಿತರ ಕಾಯಿಲೆಗಳಿಂದ ಬಳಲುತ್ತಿದ್ದ 70 ವರ್ಷದ ಪುರುಷ ಮತ್ತು ಡಯಾಬಿಟಿಸ್ ಸಹಿತ ಇತರೆ ಕಾಯಿಲೆಗಳಿಂದ ಬಳಲುತ್ತಿದ್ದ 68 ವರ್ಷದ ಮಹಿಳೆ ಈ ಮೂವರಿಗೆ ಕೊರೊನಾ ಸೋಂಕೂ ದೃಢಪಟ್ಟಿದ್ದವು.
ಇದೀಗ ಜಿಲ್ಲಾಧಿಕಾರಿ ಹೊರಡಿಸಿದ ಕೋವಿಡ್ ಸಂಬಂಧಿಸಿದ ಪ್ರಕಟಣೆಯಲ್ಲಿ ಈ ಮೂವರು ಮೃತಪಟ್ಟಿರುವ ಕುರಿತು ಮಾಹಿತಿಯನ್ನು ನೀಡಿದ್ದು, ಮರಣ ಪ್ರಕರಣಗಳ ಕಾರಣ ನಿರ್ಧರಿಸಲು ಜಿಲ್ಲಾ ಮಟ್ಟದ ತಜ್ಞರ ಸಮಿತಿಯಿಂದ ವರದಿ ನಿರೀಕ್ಷಿಸಲಾಗಿದೆ ಎಂದು ಹೇಳಿದ್ದಾರೆ. ಮೃತ 70 ರ ಹರೆಯದ ವೃದ್ಧರು ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರಿನ ಜೈನರಪೇಟೆ ನಿವಾಸಿಯಾಗಿದ್ದಾರೆ. ಇದರೊಂದಿಗೆ ಪುರಸಭಾ ವ್ಯಾಪ್ತಿಯಲ್ಲಿ ಕೊವೀಡ್ ಗೆ ಮೃತರ ಸಂಖ್ಯೆ 6 ಕ್ಕೇರಿದೆ. ಉಳಿದಂತೆ ಮೃತರಾದ 73 ವರ್ಷದ ಪುರುಷ ವಿಟ್ಲ ಪರಿಸರದವರಾಗಿದ್ದರೆ,68 ವರ್ಷದ ಮಹಿಳೆ ತಾಲೂಕಿನ ನರಿಂಗಾನ ದವವರಾಗಿದ್ದಾರೆ .
ಬಂಟ್ವಾಳ 8 ಮಂದಿಗೆ ಪಾಸಿಟಿವ್ : ಬುಧವಾರ ಬಂಟ್ವಾಳ ತಾ.ನಲ್ಲಿ 8 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಫರಂಗಿಪೇಟೆಯ 80 ವರ್ಷದ ವೃದ್ಧ, 85 ವರ್ಷದ ವೃದ್ಧೆ, ವಿಟ್ಲದ 61 ವರ್ಷದ ವೃದ್ಧೆ, ಮಂಜನಾಡಿಯ 26 ವರ್ಷದ ಮಹಿಳೆ, ಪಾಣೆಮಂಗಳೂರಿನ 26 ವರ್ಷದ ಮಹಿಳೆ, 55 ವರ್ಷದ ಮಹಿಳೆ, ಬಂಟ್ವಾಳದ 52 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ. ನರಿಕೊಂಬು ಗ್ರಾಮದಲ್ಲಿ ಮಂಗಳವಾರ ಸೋಂಕು ದೃಢಪಟ್ಟು ಆಸ್ಪತ್ರೆಗೆ ದಾಖಲಾಗಿರುವ ವ್ಯಕ್ತಿಯ 46 ವರ್ಷದ ಪತ್ನಿಗೂ ಸೋಂಕು ದೃಢಪಟ್ಟಿದೆ.
ಖರೀದಿ ಭರಾಟೆ:
ಗುರುವಾರದಿಂದ ಲಾಕ್ ಡೌನ್ ಹಿನ್ನಲೆಯಲ್ಲಿ ಬಂಟ್ವಾಳ ,ಬಿ.ಸಿ.ರೋಡ್,ಕೈಕಂಬ ಮೆಲ್ಕಾರ್ ಮೊದಲಾದ ನಗರ ಪ್ರದೇಶದಲ್ಲಿ ಸಾಮಾಗ್ರಿ ಖರೀದಿ ಭರಾಟೆ ಜೋರಾಗಿಯೇ ಇತ್ತು. ದಿನಸಿ,ತರಕಾರಿ,ಹಣ್ಣು ಹಂಪಲು,ಬೇಕರಿ, ವೈನ್ ಶಾಪ್ ,ಒಣಗಿದ ಮೀನಿನ ಅಂಗಡಿಗಳಲ್ಲಿ ಬೆಳಗ್ಗಿನ ಮತ್ತು ಸಂಜೆಯ ಹೊತ್ತು ಜನಜಂಗಳಿ ಸೇರಿತ್ತು.ಮಳೆಯ ಮಧ್ಯೆಯು ಜನರು ಸಾಮಾನು ಖರೀದಿಗಾಗಿ ಅಂಗಡಿಯತ್ತ ಧಾವಿಸುವ ದೃಶ್ಯ ಕಂಡುಬಂತು.ಆದೇರೀತಿ ಬಂಟ್ವಾಳ ರಥಬೀದಿಯಲ್ಲಿರುವ ಮೂರು ಪಡಿತರ ಅಂಗಡಿಯಲ್ಲು ಪಡಿತರ ಪಡೆಯಲು ಜನರು ಸರತಿಯ ಸಾಲಿನಲ್ಲಿ ನಿಂತಿದ್ದರು.ಗ್ರಾಮೀಣ ಭಾಗದ ಜನರು ಕೂಡ ಸಾಮಾಗ್ರಿ ಖರೀದಿಸಲು ಪೇಟೆಗೆ ತಮ್ಮ ಸ್ವಂತ ವಾಹನಗಳಲ್ಲಿ ಬಂದಿದ್ದರಿಂದ ವಾಹನಸಂಚಾರ ದಟ್ಟಣೆಯಿಂದ ಬಂಟ್ವಾಳಪೇಟೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು,ಸ್ಥಳೀಯ ಯುವಕರು,ರಿಕ್ಷಾಚಾಲಕರು ಟ್ಎಅಫಿಕ್ ಕ್ಲೀಯರ್ ಮಾಡಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದರು.
ಫರಂಗೀಪೇಟೆ ಒಪನ್:
ಕಳೆದ ಶುಕ್ರವಾರದಿಂದ ಮಧ್ಯಾಹ್ನದ ಬಳಿಕ ಸ್ವಯಂಪ್ರೇರಿತವಾಗಿ ಬಂದ್ ಗೊಳಿಸಿ ವ್ಯವಹಾರ ಸ್ಥಗಿತಗೊಂಡಿದ್ದ ಫರಂಗೀಪೇಟೆ ಸಹಿತ ಪುದುಗ್ರಾಮ ಮಂಗಳವಾರದಿಂದ ಈ ಸ್ವಯಂಪ್ರೇರಿತ ಬಂದ್ ನ್ನು ಪುದು ಗ್ರಾಪಂ ಸಡಿಲಗೊಳಿಸಿದೆ.ಗುರುವಾರದಿಂದ ದ.ಕ.ಜಿಲ್ಲೆಯಲ್ಲಿ ವಾರದ ಕಾಲ ಲಾಕ್ ಡೌನ್ ಆಗುವ ಹಿನ್ನಲೆಯಲ್ಲಿ ಫರಂಗೀಪೇಟೆಯ ಬಂದ್ ನ್ನು ಸಡಿಲಗೊಳಿಸಿ ವ್ಯಾಪಾರಸ್ಥರಿಗೆ ವ್ಯವಹಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು ಎಂದು ತಿಳಿದುಬಂದಿದೆ.
ಹೋಂ ಕ್ವಾರಂಟೈನ್ ಉಲ್ಲಂಘನೆ: ತುಂಬೆ ನಿವಾಸಿ ವಿರುದ್ಧ ಕೇಸು :
ತುಂಬೆ ಗ್ರಾಮದ ಕಾಣೆಮಾರ್ ನಿವಾಸಿ ಸಾಹಿದ್ (32) ಹೋಂ ಕ್ವಾರಂಟೈನ್ ನಿಯಮ ಉಲ್ಲಂಘಿಸಿದ ಆರೋಪದಲ್ಲಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಜುಲೈ 9ರಿಂದ ರಿಂದ 23ರವರೆಗೆ ಹೋಮ್ ಕಾರಂಟೈನ್ ಇರುವಂತೆ ತುಂಬೆ ಗ್ರಾಮ ಪಂಚಾಯತ್ ನಿಂದ ಇವರಿಗೆ ನೋಟಿಸು ಜ್ಯಾರಿ ಮಾಡಿತ್ತು. ಆದರೆ 14ರಂದು ಬಂಟ್ವಾಳ ಪೊಲೀಸ್ ಠಾಣಾ ಸಿಬ್ಬಂದಿ ಮದ್ಯಾಹ್ನ 12.30 ಗಂಟೆ ಸುಮಾರಿಗೆ ಪರಿಶೀಲಿಸಲಾಗಿ ವ್ಯಕ್ತಿಯು ಮನೆಯಲ್ಲಿರದಿದ್ದು, ಕೊರೋನಾ ನಿಮಿತ್ತ ಸರ್ಕಾರ ಅದೇಶಿಸಿರುವ ಹೋಮ್ ಕಾರಂಟೈನ್ ನಿಯಮಾವಳಿಗಳನ್ನು ಉಲ್ಲಂಘಿಸಿ ಸಾರ್ವಜನಿಕ ಸ್ಥಳಗಳಿಗೆ ತೆರಳಿ ಜನರೊಂದರೆ ಬೆರೆತಿರುವುದು ತಿಳಿದು ಬಂದಿದೆ ಎಂದು ಹೇಳಿರುವ ಪೊಲೀಸರು, ಈ ಕುರಿತು ಪ್ರಕರಣ ದಾಖಲಿಸಿದ್ದಾರೆ.
ಬಸ್ ಕಡಿತ: ಪ್ರಯಾಣಿಕರ ಆಕ್ರೋಶ;
ಲಾಕ್ ಡೌನ್ ಹಿನ್ನಲೆಯಲ್ಲು ಮಂಗಳೂರಿಗೆ ಕೆಲಸಕ್ಕಾಗಿ ಬಂದಿದ್ದ ಧರ್ಮಸ್ಥಳ ರೂಟಿನ ಪ್ರಯಾಣಿಕರು ಬಸ್ ಸಂಚಾರ ಕಡಿತದಿಂದಾಗಿ ಮಂಗಳೂರು ಸ್ಟೇಟ್ ಬ್ಯಾಂಕ್ ಬಳಿ ಪರದಾಡಬೇಕಾಯಿತು.ಈ ಸಂದರ್ಭದಲ್ಲಿ ಆಕ್ರೋಶಿತರಾದ ಪ್ರಯಾಣಿಕರು ಕೆಎಸ್ ಆರ್ ಟಿಸಿ ಟಿಸಿಯನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗವು ನಡೆಯಿತು.ಲಾಕ್ ಡೌನ್ ಇರಲಿ ,ಇಲ್ಲದಿರಲಿ ಕೆಎಸ್ ಆರ್ ಟಿಸಿ ಗೆ ಧರ್ಮಸ್ತಳ ರೂಟನ್ನು ಮೊದಲೇ ಕೇಳುವವರಿಲ್ಲದಾಗಿದ್ದು,ಪ್ರಯಾಣಿಕರು ಸರಿಯಾಗಿಯೇ ಟಿ.ಸಿ.ಪಾಯಿಂಟ್ ನಲ್ಲಿದ್ದ ಟಿ.ಸಿ.ಗೆ ಉಗಿದಿದ್ದಾರೆ.ಕೊನೆಗೆ ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಗಳು ಮಧ್ಯಪ್ರವೇಶಿಸಿ,ಟಿ.ಸಿ.ಯನ್ನು ತರಾಟೆಗೆ ತೆಗೆದುಕೊಂಡು ಡಿಪ್ಪೋದಿಂದ ಬಸ್ ತರಿಸಿ ಪ್ರಯಾಣಿಕರನ್ನು ಕಳುಹಿಸುವ ವ್ಯವಸ್ಥೆ ಮಾಡುವಂತೆ ತಾಕೀತು ಮಾಡಿದರು.
