ಬಂಟ್ವಾಳ: ಇಲ್ಲಿನ ಎಸ್ ವಿ ಎಸ್ ಪ್ರೌಢಶಾಲೆಯ ವಿಕಲಚೇತನ ವಿದ್ಯಾರ್ಥಿ ಕೌಶಿಕ್ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ತನ್ನ ಕಾಲಬೆರಳಿನಲ್ಲಿ ಬೆರದ ರಾಜ್ಯಾದಾದ್ಯಂತ ಸುದ್ದಿ ಮಾಡಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ಗಮನಸೆಳೆದು ಭೇಷ್ ಅನಿಸಿಕೊಂಡಿದ್ದ.ಇದೀಗ ಬಂಟ್ವಾಳ ತಾಲೂಕು ಕೂರಿಯಾಳ ಗ್ರಾಮದ ಭಾಗ್ಯಶ್ರೀ ಎಂಬ ವಿಕಲಚೇತನ ವಿದ್ಯಾರ್ಥಿನಿ ಬಡತನದ ಮಧ್ಯೆಯು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 467 ಅಂಕ ಪಡೆದು ಸಾಧನೆ ಮಾಡಿದ್ದಾಳೆ.
ಬಂಟ್ವಾಳ ತಾಲೂಕಿನ ಕೂರಿಯಾಳ ಗ್ರಾಮದ ಕೇಶವ ಕುಲಾಲ್ ಮತ್ತು ರಾಜೀವಿ ಪುತ್ರಿ ಭಾಗ್ಯಶ್ರೀ. ತಂದೆ ಕೇಶವ ಕೂಡಾ ಹುಟ್ಟಿನಿಂದಲೇ ಅಂಗವೈಕಲ್ಯಕ್ಕೆ ತುತ್ತಾದವರು. ಮನೆಯ ಪಕ್ಕದಲ್ಲಿ ಒಂದು ಗೂಡಂಗಡಿ ಇಟ್ಟುಕೊಂಡಿದ್ದರೆ,ಇವರ ಪತ್ನಿ ಬೀಡಿ ಕಟ್ಟುತ್ತಿದ್ದು ತನ್ಮೂಲಕ ತಮ್ಮ ಜೀವನದ ಬಂಡಿಯನ್ನು ಎಳೆಯುತ್ತಿದ್ದಾರೆ. ಇವರಿಗೆ ಇಬ್ಬರು ಹೆಣ್ಣು ಮಕ್ಕಳು, ಹಿರಿಯಾಕೆ ದ್ವಿತೀಯ ಬಿ.ಕಾಂ ಓದುತ್ತಿದ್ದಾಳೆ. ಎರಡನೆಯವಳು ಭಾಗ್ಯಶ್ರೀ ಹುಟ್ಟು ವಿಕಲಚೇತನೆ..
ಅಮ್ಮನೇ ಆಸರೆ : ಸೊಂಟದಿಂದ ಕೆಳಭಾಗದಲ್ಲಿ ಪೂರ್ತಿ ನಿಶಕ್ತಿ..ಅಮ್ಮನೇ ಈ ಕರುಳಬಳ್ಳಿಗೆ ಆಸರೆ, ಅಮ್ಮನೇ ಈಕೆಯನ್ನು ಎತ್ತಿ ತನ್ನ ಸೊಂಟದಲ್ಲಿ ಕೂರಿಸಿ ಎತ್ತಿಕೊಂಡು ಹೋಗಿಯೇ ಅವಳನ್ನು ಶಾಲೆಗೆ ಬಿಟ್ಟು ಅಲ್ಲಿಯೇ ಇದ್ದು ಮತ್ತೆ ಸಂಜೆ ಮನೆಗೆ ಕರೆದುಕೊಂಡು ಬರುತ್ತಿದ್ದರು.ಕಲಿಕೆಯಲ್ಲಿ ಆಸಕ್ತಿಯನ್ನು ಬೆಳಸಿಕೊಂಡಿದ್ದ ಭಾಗ್ಯಶ್ರೀ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಲೊರೆಟ್ಟೋ ಚರ್ಚ್ ಶಾಲೆಯಲ್ಲಿ ಪೂರೈಸಿದ್ದಳು. ಅಲ್ಲಿಯೂ ಆಕೆಯ ಸಾಧನೆ ಕಮ್ಮಿ ಇಲ್ಲ, ಎಸ್.ಎಸ್.ಎಲ್.ಸಿಯಲ್ಲಿ 470 ಅಂಕಗಳನ್ನು ಪಡೆದು ಉತ್ತೀರ್ಣಳಾಗಿದ್ದಳು, ಮುಂದೆ ಪಿಯುಸಿಗೆ ಎಸ್.ವಿ.ಎಸ್ ಪದವಿಪೂರ್ವ ಕಾಲೇಜನ್ನು ಸೇರಿದ್ದಳು. ಇಲ್ಲೂ ಇವಳು ಎಲ್ಲರೂ ನೆನಪಿಟ್ಟುಕೊಳ್ಳುವಂತಹ ಸಾಧನೆ ಮಾಡಿದ್ದಾಳೆ. ಇತ್ತೀಚೆಗೆ ಶ್ರೀ.ಕ್ಷೇ.ಗ್ರಾ.ಯೋ.ಯ ತಾಲೂಕು ಘಟಕದಿಂದ ವೀಲ್ ಚೇರ್ ಒದಗಿಸಲಾಗಿತ್ತು.ಆ ಬಳಿಕ ವೀಲ್ ಚೇರ್ ನೊಂದಿಗೆ ತಾಯಿ ರಿಕ್ಷಾ ಬಾಡಿಗೆ ಮಾಡಿಕೊಂಡು ಬಂದು ಕಾಲೇಜಿಗೆ ಬಿಡುತ್ತಿದ್ದರು. ಅಲ್ಲಿ ವೀಲ್ ಚೇರ್ನಲ್ಲಿಯೇ ಇವಳ ಕಲಿಕೆ ಸಾಗುತ್ತಿತ್ತು. ಅವಳ ಸ್ನೇಹಿತೆಯರು ಕೂಡಾ ಬಿಡುವಿನ ಹೊತ್ತಿನಲ್ಲಿ ಇವಳನ್ನು ವೀಲ್ ಚೇರ್ ನಲ್ಲಿಯೇ ಕರೆದುಕೊಂಡು ಹೋಗುತ್ತಿದ್ದು, ಸಹಪಾಠಿ ವಿದ್ಯಾತರ್ರಿನಿಯರು ಕೂಡ ಭಾಗ್ಯಶ್ರೀಯನ್ನು ಅಕ್ಕರೆಯಿಂದಲೇ ಕಾಣುತ್ತಿದ್ದರು.
ಪ್ಲೋರ್ ಗೆ ಹತ್ತುತ್ತಿದ್ದಳು; ತಾನು ಇನ್ನೊಬ್ಬರ ಮೇಲೆ ಅವಲಂಬಿತಳಾಗಬಾರದು ಎನ್ನುವ ಕಾರಣಕ್ಕಾಗಿ ಕಾಲೇಜಿನಲ್ಲಿ ಎರಡು ಮರದ ತುಂಡನ್ನು ಹಿಡಿದುಕೊಂಡು ಒಂದು ಫ್ಲೋರ್ನಿಂದ ಇನ್ನೊಂದು ಫ್ಲೋರ್ಗೆ ಹತ್ತಿ ಇಳಿಯುತ್ತಿದ್ದಳು.ಇದನ್ನು ನೋಡಿದಾಗ ಈಕೆ ಸಹಪಾಠಿಗಳ ಕರುಳು ಚುರಕ್ ಎನ್ನುತ್ತಿತ್ತು. ಇಂತಹ ಅಂಗವೈಕಲ್ಯ ಇದ್ದರೂ ಅವಳ ಸಾಧನೆಗೆ ಅದು ಅಡ್ಡಿಯಾಗಲಿಲ್ಲ. ಇದೀಗ ದ್ವಿತೀಯ ಪಿಯುಸಿಯಲ್ಲಿ ವಾಣಿಜ್ಯ ವಿಭಾಗದಲ್ಲಿ 467 ಅಂಕಗಳನ್ನು ಪಡೆದಿರುವುದು ಸಣ್ಣ ಸಾಧನೆಯೂ ಅಲ್ಲ. ಮನಸ್ಸೊಂದು ಇದ್ದರೆ ಏನನ್ನು ಸಾಧಿಸುವುದು ಕಷ್ಟ ಅಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಬಿ.ಕಾಂ ಕಲಿಯಬೇಕು: ನನ್ನ 12 ವರ್ಷಗಳ ವಿದ್ಯಾಭ್ಯಾಸದ ಸಾಧನೆಯಲ್ಲಿ ಬೆನ್ನೆಲುಬಾಗಿ, ನನ್ನನ್ನು ಎತ್ತಿಕೊಂಡೇ ಬಂದ ಅಮ್ಮನ ಸಹಾಯ ಜೀವನದಲ್ಲಿ ಮರೆಯುವಂತಿಲ್ಲ. ಅವರಿಂದಾಗಿ ನಾನು ಇಷ್ಟು ಕಲಿಯಲು ಸಾಧ್ಯವಾಯಿತು. ಇನ್ನು ಮನೆಯಲ್ಲಿಯೇ ಇದ್ದು ದೂರ ಶಿಕ್ಷಣದಲ್ಲಿ ಬಿ.ಕಾಂ. ಕಲಿಯಬೇಕು ಎಂಬ ಆಸೆ ನನ್ನದು. ನನ್ನ ಸ್ನೇಹಿತರು, ಉಪನ್ಯಾಸಕರು ನನಗೆ ಒಳ್ಳೆಯ ಪ್ರೋತ್ಸಾಹ ನೀಡಿದ್ದಾರೆ. ಅವರಿಗೆ ನಾನು ಆಭಾರಿಯಾಗಿದ್ದೇನೆ ಎನ್ನುತ್ತಾಳೆ ಭಾಗ್ಯಶ್ರೀ..

