ಕೈಕಂಬ : ಗುಡ್ಡೆ ಕುಸಿದು ಇಬ್ಬರು ಮಕ್ಕಳು ಮೃತಪಟ್ಟ ದುರ್ಘಟನೆ ಸಂಭವಿಸಿದ ಗುರುಪುರ ಮಠದಗುಡ್ಡೆ ಮೂಳೂರು ಸೈಟ್ ಸಂಖ್ಯೆ 133ರಿಂದ ಈಗಾಗಲೇ 60ರಷ್ಟು ಮನೆ ಖಾಲಿ ಮಾಡಲಾಗಿದ್ದು, ಸುಮಾರು 90ರಿಂದ 100 ಸಂತ್ರಸ್ತ ಕುಟುಂಬಗಳಿಗೆ ನೀರುಮಾರ್ಗ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೊಂಡಂತಿಲ ಗ್ರಾಮದಲ್ಲಿ ವಸತಿ ನಿರ್ಮಿಸಲು ಜಾಗ ಗುರುತಿಸುವ ಪ್ರಕ್ರಿಯೆ ಆರಂಭಗೊಂಡಿದೆ.gur-july-7-DT@RI@PDO-3

ಉಪ-ತಹಶೀಲ್ದಾರ್ ಶಿವಪ್ರಸಾದ್, ಕಂದಾಯ ನಿರೀಕ್ಷಕ(ಆರ್‍ಐ) ಆಸೀಫ್ ಮತ್ತು ಗುರುಪುರ ಗ್ರಾಪಂ ಪಿಡಿಒ ಅಬೂಬಕ್ಕರ್ ನೇತೃತ್ವದ ತಂಡವೊಂದು ಮಂಗಳವಾರ ಬೊಂಡಂತಿಲ ಗ್ರಾಮಕ್ಕೆ ಭೇಟಿ ನೀಡಿ, ಜಿಲ್ಲಾಡಳಿತ ಸೂಚಿಸಿದ ಸರ್ವೇ ನಂಬ್ರ 192(1) ಮತ್ತು ಸರ್ವೇ ನಂಬ್ರ 190ರ ಸರ್ಕಾರಿ ಗೋಮಾಳ ಜಾಗ ಪರಿಶೀಲಿಸಿತು. ತಂಡದಲ್ಲಿ ನೀರುಮಾರ್ಗ ಗ್ರಾಮ ಲೆಕ್ಕಾಧಿಕಾರಿ ಅಮ್ಜದ್ ಖಾನ್, ತಿರುವೈಲು ಗ್ರಾಮ ಕರಣಿಕ ಮೆಹಬೂಬ್, ನೀರುಮಾರ್ಗ ಗ್ರಾಮ ಸಹಾಯಕ ಪ್ರಕಾಶ್, ಗುರುಪುರ ಕಂದಾಯ ಗ್ರಾಮ ಸಹಾಯಕ ಅಶ್ರಫ್ ಹಾಗೂ ತಾಪಂ ಸದಸ್ಯ ಸಚಿನ್ ಅಡಪ, ಗುರುಪುರ ಪಂಚಾಯತ್ ಸದಸ್ಯ ರಾಜೇಶ್ ಸುವರ್ಣ ಇದ್ದರು.

ಗುಡ್ಡದ ಮೇಲಿನ ಈ ಎರಡು ಸರ್ವೇ ನಂಬ್ರದಲ್ಲಿ ಒಟ್ಟು 20 ಎಕ್ರೆ 46 ಸೆಂಟ್ಸ್ ಜಾಗವಿದೆ. ಇಲ್ಲಿ ಗುರುಪುರ ಮಠದಗುಡ್ಡೆ ಮೂಳೂರು ಸೈಟಿನ ಸುಮಾರು 100 ಸಂತ್ರಸ್ತ ಕುಟುಂಬಗಳಿಗೆ(ತಲಾ 2.75 ಸೆಂಟ್ಸ್) ಮನೆ ನಿರ್ಮಿಸಿ ಕೊಡಲು ಸಾಧ್ಯವಿದೆ. ಉಳಾಯಿಬೆಟ್ಟು ಗ್ರಾಪಂ ಮತ್ತು ಮಲ್ಲೂರು ಗ್ರಾಪಂ ಗಡಿ ಪ್ರದೇಶದಲ್ಲಿರುವ ಈ ಸರ್ಕಾರಿ ಗೋಮಾಳ ಜಾಗದಲ್ಲಿ ಉತ್ತಮ ರಸ್ತೆಯೂ ಇದೆ. ಅಲ್ಲದೆ ಪಕ್ಕದಲ್ಲಿ ಉಳಾಯಿಬೆಟ್ಟು ಗ್ರಾಪಂ ವ್ಯಾಪ್ತಿಗೆ ಸಂಬಂಧಿಸಿದ ಕೆಲವು ಮನೆಗಳಿವೆ.

“ಸರ್ಕಾರ ಜಿಲ್ಲಾಡಳಿತಕ್ಕೆ ನೀಡಿರುವ ಆದೇಶದಂತೆ ಜಿಲ್ಲಾಧಿಕಾರಿಯವರು ಗುರುಪುರ ಮಠದಗುಡ್ಡೆ ನಿರ್ವಸತಿಗರಿಗೆ ಬೊಂಡಂತಿಲ ಗ್ರಾಮದಲ್ಲಿ ನಿವೇಶನ ಗುರುತಿಸಲು ನಿರ್ದೇಶನ ನೀಡಿದ್ದಾರೆ. ಅದರಂತೆ ನಾವಿಂದು ಇಲ್ಲಿ ಸಮೀಕ್ಷೆ ನಡೆಸಿ, ಜಿಲ್ಲಾಧಿಕಾರಿಯವರಿಗೆ ವರದಿ ನೀಡಲಿದ್ದೇವೆ. ಇದಕ್ಕಿಂತ ಮುಂಚೆ ಸಂತ್ರಸ್ತರೊಂದಿಗೆ ಮಾತುಕತೆ ನಡೆಸಲಾಗುವುದು” ಎಂದು ಉಪತಹಶೀಲ್ದಾರ್ ಶಿವಪ್ರಸಾದ್ ಮಾಧ್ಯಮಕ್ಕೆ ತಿಳಿಸಿದರು.

By suddi9

Leave a Reply

Your email address will not be published. Required fields are marked *