ಬಜ್ಪೆ : ಕೊರೊನಾ ವೈರಸ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಬಜ್ಪೆ ಗ್ರಾಮ ಪಂಚಾಯತ್ ಆಡಳಿತವು ಎಪ್ರಿಲ್ 3ರಂದು ಬಜ್ಪೆ ದಿನವಹಿ ಹಣ್ಣು ಮತ್ತು ತರಕಾರಿ ಮಾರುಕಟ್ಟೆಯನ್ನು ತಾತ್ಕಾಲಿಕ ನೆಲೆಯಲ್ಲಿ ಕೇಂದ್ರ ಮೈದಾನಕ್ಕೆ ಸ್ಥಳಾಂತರಿಸಿದ್ದು, ಸೋಮವಾರದಿಂದ ನವೀಕೃತ ಮಾರುಕಟ್ಟೆಯಲ್ಲಿ ವಹಿವಾಟು ಪುನರಾರಂಭಗೊಂಡಿದೆ.
ತರಕಾರಿ ಮತ್ತು ಹಣ್ಣು ವ್ಯಾಪಾರದ ಹಳೆಯ ಮಾರುಕಟ್ಟೆ ವ್ಯವಸ್ಥಿತವಾಗಿರಲಿಲ್ಲ ಮತ್ತು ವ್ಯಾಪಾರಿಗಳು ಮತ್ತು ಗ್ರಾಹಕರಿಗೆ ಹೆಚ್ಚಿನ ಅನುಕೂಲಗಳಿರಲಿಲ್ಲ. ಈ ಅಂಶ ಮನಗಂಡ ಬಜ್ಪೆ ಗ್ರಾಮ ಪಂಚಾಯತ್ ಆಡಳಿತವು ಹಳೆ ಮಾರುಕಟ್ಟೆ ಪ್ರಾಂಗಣ ನವೀಕರಿಸಿದಲ್ಲದೆ ವಿದ್ಯುತ್ ಸಂಪರ್ಕ, ಸೀಸಿ ಕ್ಯಾಮರಾ, ಸಾಮಾಜಿಕ ಅಂತರ ಗೆರೆ, ಮಳೆ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಪಂಚಾಯತ್ ಪಿಡಿಒ ಸಾಯೀಸ್ ಚೌಟ ತಿಳಿಸಿದರು.
ಕೊರೋನಾ ವೈರಸ್ ಹರಡುವಿಕೆ ತಡೆಗಟ್ಟಲು ಬಜ್ಪೆ ಗ್ರಾಪಂ ಆಡಳಿತವು ಸ್ವಚ್ಛತಾ ಕಾರ್ಯಕ್ರಮದ ಸಹಿತ ಇದುವರೆಗೆ ಅನೇಕ ಉಪಕ್ರಮ ಜಾರಿಗೆ ತಂದಿದೆ. ಪಂಚಾಯತ್ ಅಧ್ಯಕ್ಷೆ, ಉಪಾಧ್ಯಕ್ಷ, ಸದಸ್ಯರು ಮತ್ತು ಪಿಡಿಒ ಉಪಸ್ಥಿತಿಯಲ್ಲಿ ಹಲವು ಸಭೆ ನಡೆಸಿ, ಪರಿಸ್ಥಿತಿಗೆ ಅನುಗುಣವಾಗಿ ಗ್ರಾಮದಲ್ಲಿ ಹಲವು ಪರಿಹಾರೋಪಾಯ ಕೆಲಸ ನಡೆಸಲಾಗುತ್ತಿದೆ ಎಂದರು.
