ಕೈಕಂಬ: ಕುಪ್ಪೆಪದವಿಗೆ ಹತ್ತಿರದ ಆಚಾರಿಜೋರ ಎರ್ಮಾಳುವಿನ ನಿವಾಸಿ, 24 ವರ್ಷದ ಯುವಕ ಶನಿವಾರ ರಾತ್ರಿ ಕೊರೊನಾ ಪಾಸಿಟಿವ್‍ನಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಈತ ಮೇ 27ರಂದು ಮುಂಬೈಯಿಂದ ವಿಮಾನದಲ್ಲಿ ಬಂದಿದ್ದ ಎನ್ನಲಾಗಿದ್ದು, ಒಂದು ದಿನ ಮಂಗಳೂರಿನ ಕ್ವಾರಂಟೈನ್ ಕೇಂದ್ರದಲ್ಲಿದ್ದ. ನಂತರ ಕುಪ್ಪೆಪದವಿನಲ್ಲಿರುವ ಕ್ವಾರಂಟೈನ್ ಸ್ಥಳಾಂತರಗೊಂಡಿದ್ದ. ಇಲ್ಲಿ ಎರಡೇ ದಿನದಲ್ಲಿ ಕಿಡ್ನಿ ನೋವು ವಿಪರೀತಗೊಂಡು ಮಂಗಳೂರು ತಹಶೀಲ್ದಾರರ ಶಿಫಾರಸಿನ ಮೇರೆಗೆ ಮದ್ದು ಮಾಡಲು ಮನೆಗೆ ತೆರಳಿದ್ದ ಎನ್ನಲಾಗಿದೆ.14vp korona savu

ಇತ್ತೀಚಿನ ಕೆಲವು ದಿನಗಳಿಂದ ಈ ಯುವಕ ಕುಪ್ಪೆಪದವು ಹಾಗೂ ಇತರ ಕಡೆಯಲ್ಲಿ ರಿಕ್ಷಾಗಳಲ್ಲಿ ತಿರುಗಾಡುತ್ತಿದ್ದ. ಅಂಗಡಿ ಹಾಗೂ ಮನೆಗಳಿಗೂ ಹೋಗಿದ್ದ. ಮನೆ ಮದ್ದು ಮಾಡಿದ್ದ ಈತ ಗುರುವಾರ ತೀವ್ರ ರಕ್ತ ಕಾರಿದ್ದು, ಶುಕ್ರವಾರ(ಜೂ. 12) ಮಂಗಳೂರಿನ ಖಾಸಗಿ ಆಸ್ಪತ್ರೆ ದಾಖಲಾಗಿದ್ದ. ಚಿಕಿತ್ಸೆಗೆ ಸ್ಪಂದಿಸದೆ ಅಂದೇ ಮೃತಪಟ್ಟಿದ್ದಾನೆ. ಮರಣೋತ್ತರ ಪರೀಕ್ಷೆ ನಡೆಸಿದಾಗಲೇ ಈಗನಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.

ಟಾಸ್ಕ್ ಫೋರ್ಸ್ ಎಲ್ಲಿದೆ? : ಹೋಮ್ ಕ್ವಾರಂಟೈನ್ ನಲ್ಲಿರುವ ವ್ಯಕ್ತಿಗಳು ಕ್ವಾರಂಟೈನ್ ನಿಯಮಗಳನ್ನು ಪಾಲಿಸುತ್ತಾರೆಯೇ, ಅಥವಾ ಉಲ್ಲಂಘನೆ ಮಾಡಿ ಹೊರಗಡೆ ಸುತ್ತಾಡುತ್ತಾರೆಯೇ ಎಂಬ ಬಗ್ಗೆ ನಿಗಾ ಇಡಲು ಮತ್ತು ನೊವೆಲ್ ಕೊರೊನಾ ಬಗ್ಗೆ ಗಮನಿಸಲು ಸರಕಾರ ಗ್ರಾಮಮಟ್ಟದಲ್ಲಿ ಟಾಸ್ಕ್ ಫೋರ್ಸ್ ಗಳನ್ನು ರಚಿಸಿತ್ತು. ಆದರೆ ಟಾಸ್ಕ್ ಫೋರ್ಸ್ ಗಳು ಎಲ್ಲಿವೆ? ಅವುಗಳು ನಿದ್ದೆ ಮಾಡುವಂತಿವೆ. ಯುವಕ ಹೋಮ್ ಕ್ವಾರಂಟೈನ್ ಗೆ ಒಳಪಟ್ಟ ನಂತರ ಮನೆಯಿಂದ ಹೊರ ಬಂದಾಗ ಟಾಸ್ಕ್ ಫೋರ್ಸ್ ಎಲ್ಲಿತ್ತು? ಹೋಮ್ ಕ್ವಾರಂಟೈನ್ ಗೆ ಒಳಪಟ್ಟ ಮನೆಯವರು ಹೊರಗಡೆ ಸುತ್ತಾಡದಂತೆ ನೋಡಿಕೊಳ್ಳುವ ಜವಾಬ್ದಾರಿ ಟಾಸ್ಕ್ ಫೋರ್ಸ್ ನದ್ದಾಗಿರಲಿಲ್ಲವೇ? ಮೃತಪಟ್ಟ ಯುವಕ ಹೋಮ್ ಕ್ವಾರಂಟೈನಲ್ಲಿರುವಾಗ ಆತನಿಗೆ ಔಷಧಿಯೂ ಸೇರಿದಂತೆ ತುರ್ತು ಅವಶ್ಯಕತೆಗಳನ್ನು ಪೂರೈಸುವ ಹೊಣೆ ಯಾರದ್ದು? ಎರ್ಮಾಳ ದ ಯುವಕ ಮತ್ತು ಆತನ ಮನೆಯವರು ಪೇಟೆ ಸುತ್ತಾಡಲು ಟಾಸ್ಕ್ ಫೋರ್ಸ್ ವೈಫಲ್ಯ ಕಾರಣವಾಗಿದೆ. ಕುಪ್ಪೆಪದವು ಪಂಚಾಯತ್ ನ ಟಾಸ್ಕ್ ಫೋರ್ಸ್ ಈ ವಿಚಾರದಲ್ಲಿ ಸಂಪೂರ್ಣ ಎಡವಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಸರ್ಕಾರಿ ಮಾರ್ಗಸೂಚಿಯಂತೆ ಕುಟುಂಬಕ್ಕೆ ಶವ ನೀಡಲು ನಿರಾಕರಿಸಿರುವ ಅಧಿಕಾರಿಗಳು ಮಂಗಳೂರಲ್ಲೇ ಅಂತ್ಯ ಸಂಸ್ಕಾರ ನಡೆಸಲು ತೀರ್ಮಾನಿಸಿದ್ದಾರೆ. ಸದ್ಯ ಪೊಲೀಸ್ ಮತ್ತು ಆರೋಗ್ಯ ಇಲಾಖೆ ಯುವಕನ ಮನೆಯ ಸುತ್ತ 100 ಮೀಟರ್ ಅಂತರದಲ್ಲಿ ಸೀಲ್‍ಡೌನ್ ಮಾಡಲು ನಿರ್ಧರಿಸಿ, ಮೃತನ ಟ್ರಾವೆಲ್ ವಿಷಯ ಹುಡುಕಾಟ ಆರಂಭಿಸಿದೆ.

By Suddi9

Leave a Reply

Your email address will not be published. Required fields are marked *