ಉಡುಪಿ: ನಗರ ಪೊಲೀಸ್ ಠಾಣೆ ಹಾಗೂ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಇವರು, ವಾರಸುದಾರರು ಇಲ್ಲದ ನಾಲ್ಕು ಶವಗಳ ಅಂತ್ಯಸಂಸ್ಕಾರವನ್ನು ಬೀಡಿನಗುಡ್ಡೆ ಹಿಂದು ರುದ್ರಭೂಮಿಯಲ್ಲಿ ಅಂತಿಮ ಗೌರವಗಳೊಂದಿಗೆ ಗುರುವಾರ ದಫನ ಮೂಲಕ ನಡೆಸಿದರು.ಮೃತಪಟ್ಟಿರುವ ನಾಲ್ವರು ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದವರು. ಗಂಭೀರ ಕಾಯಿಲೆಗಳಿಂದ ಬಳಲುತ್ತಿದ್ದ ಅವರು ಚಿಕಿತ್ಸೆಗೆ ಸ್ಪಂದಿಸಿದೆ ಮೃತಪಟ್ಟಿದ್ದರು.
ಮೃತರಲ್ಲಿ ಮೂವರು ಅಪರಿಚಿತ ರೋಗಿಗಳಾಗಿ ಸಾರ್ವಜನಿಕ ಸ್ಥಳದಲ್ಲಿ ಅಸಹಾಯಕರಾಗಿ ಕಂಡು ಬಂದಿದ್ದರು. ಸಮಾಜಸೇವಕರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರು ಮಾನವಿಯತೆ ನೆಲೆಯಲ್ಲಿ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಕೆಲವು ದಿನಗಳಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದರು.
ಮೃತರ ಕಳೇಬರಗಳನ್ನು ವಾರಸುದಾರರ ಬರುವಿಕೆಯ ನಿರೀಕ್ಷೆಯಲ್ಲಿ ಜಿಲ್ಲಾಸ್ಪತ್ರೆಯ ಶೀತಲಿಕರಣ ಶವಗಾರದಲ್ಲಿ ರಕ್ಷಿಸಿ ಇಡಲಾಗಿತ್ತು. ವಾರಸುದಾರರ ಆಹ್ವಾನೆಗಾಗಿ ಮಾಧ್ಯಮ ಪ್ರಕಟಣೆ ನೀಡಲಾಗಿತ್ತು. ವಾರಸುದಾರರು ಕಾಯುವಿಕೆಯ ಕಾಲಮಿತಿ ಕಳೆದರೂ ಬಾರದೆ ಇರುವುದರಿಂದ ಕಾನೂನಿನಂತೆ ಪ್ರಕ್ರಿಯೆಗಳ ನಡೆಸಿದ ಬಳಿಕ ತನಿಖಾ ಸಹಾಯಕ ವಿಶ್ವನಾಥ್ ಶೆಟ್ಟಿ ಅಮಾಸೆಬೈಲು ಅವರ ಸಮಕ್ಷಮ ದಫನ ನಡೆಸಲಾಯಿತು.
ಅಂತ್ಯಸಂಸ್ಕಾರ ಕಾರ್ಯದಲ್ಲಿ ನಗರ ವಲಯ ಭಜನಾ ಮಂಡಳಿಗಳ ಅಧ್ಯಕ್ಷರಾದ ಕಿಶೋರ ಕರ್ನಾಪಾಡಿ, ರಮಾನಂದ ದೇವಾಡಿಗ, ಮಧ್ವರಾಜ್, ಸುಶೀಲ ರಾವ್, ಸಾಜಿ ಅಜ್ಜರಕಾಡು ಹಾಗೂ ಮತ್ತಿತರರು ಭಾಗಿಗಳಾಗಿ ಸಹಕರಿಸಿದರು.
