ಬಂಟ್ವಾಳ, : ಪಂಜಿಕಲ್ಲು ಗ್ರಾಮದ ಮಹಿಳೆಗೆ ಸೋಮವಾರ ಮುಂಜಾನೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಬಂಟ್ವಾಳ ೧೦೮ ಆ್ಯಂಬುಲೆನ್ಸ್ ನವರ ಸಮಯ ಪ್ರಜ್ಞೆಯಿಂದ ಮನೆಯಲ್ಲೇ ಯಶಸ್ವಿಯಾಗಿ ಹೆರಿಗೆ ಮಾಡಿಸಲಾಗಿದೆ.
ಪಂಜಿಕಲ್ಲು ಗ್ರಾಮ ನಿವಾಸಿ ಗೀತಾ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡ ಕುರಿತು ಸೋಮವಾರ ಮುಂಜಾನೆ ೬ಕ್ಕೆ ಬಂಟ್ವಾಳ ೧೦೮ ಆ್ಯಂಬುಲೆನ್ಸ್ ಗೆ ಕರೆ ಬರುತ್ತದೆ. ತಕ್ಷಣ ಆ್ಯಂಬುಲೆನ್ಸ್ ಚಾಲಕ ಭೀಮಪ್ಪ ಹಾಗೂ ಶುಶ್ರೂಷಕ ಮಂಜುನಾಥ ಅವರು ತೆರಳುತ್ತಾರೆ. ಆದರೆ ಮಹಿಳೆಯ ಮನೆಗೆ ಹೋಗುವುದಕ್ಕೆ ರಸ್ತೆ ಇಲ್ಲದೆ ಸುಮಾರು ಅರ್ಧ ಕಿ.ಮೀ. ನಡೆದುಕೊಂಡು ಹೋಗುತ್ತಾರೆ. ಆದಾಗಲೇ ಗೀತಾ ಅವರಿಗೆ ತೀವ್ರ ನೋವು ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಮನೆಯಲ್ಲೇ ಹೆರಿಗೆ ಮಾಡಿಸುತ್ತಾರೆ. ಬಳಿಕ ಅವರನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗೀತಾ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮಗು ಆರೋಗ್ಯವಾಗಿದ್ದಾರೆ.