ಬಂಟ್ವಾಳ: ಬಿ.ಸಿ.ರೋಡ್ ಸಹಿತ ಬಂಟ್ವಾಳ ತಾಲೂಕಿನ ಪ್ರಮುಖ ಪೇಟೆ, ಹಳ್ಳಿಗಳಲ್ಲಿ ಸಂಪೂರ್ಣ ಬಂದ್ ಭಾನುವಾರವು ಕಂಡುಬಂತು. ಮುಂಜಾನೆ 6 ಗಂಟೆಯ ಬಳಿಕ ಬಂಟ್ವಾಳ ನಗರ ಪ್ರದೇಶದಲ್ಲಿ ಕೆಲ ದಿನಸಿ,ತರಕಾರಿ,ಮಾಂಸದಂಗಡಿ,ಹಾಲು ವಿತರಕರ ಅಂಗಡಿಗಳು ತೆರದಿದ್ದು,ಹಳ್ಳಿ ಭಾಗದ ಜನರು ದಿನಬಳಕೆವಸ್ತುಗಳನ್ನು ಖರೀದಿಸಲು ಮುಗಿಬಿದ್ದ ದೃಶ್ಯಗಳು ಕಂಡು ಬಂತು. ಬಿ.ಸಿ.ರೋಡ್ ನಲ್ಲು ಕೆಲ ಅಂಗಡಿಗಳು ಸ್ವಲ್ಪ ಹೊತ್ತು ತೆರೆದು ಸಮಯ ಮೀರುತ್ತಿದ್ದಂತೆ ಮುಚ್ಚಿತು.
ಲಾಠಿಬೀಸಿದ ಕಾನ್ಸ್ ಟೇಬಲ್:
ಬಂಟ್ವಾಳ ಬಡ್ಡಕಟ್ಟೆ ಪರಿಸರದಲ್ಲಿ ಜನರು ದಿನಬಳಕೆ ವಸ್ತು,ತರಕಾರಿ,ಹಾಲು,ಮಾಂಸದ ಖರೀದಿಯ ಭರಾಟೆಯಲ್ಲಿದ್ದರೆ,ಅತ್ತ ಕಾರೊಂದರಲ್ಲಿ ಅಗಮಿಸಿದ ಕಾನ್ಸ್ ಟೇಬಲ್ ವೋರ್ವರು ಕಾರಿನಿಂದಿಳಿದು ಜನರನ್ನು ನಿಂದಿಸಿ ಏಕಾಏಕಿ ಲಾಠಿಬೀಸಿ ತನ್ನ ಪೌರುಷವನ್ನು ತೋರುತ್ತಿದ್ದಂತೆ ಜನ ಚೆಲ್ಲಾಪಿಲ್ಲಿಯಾಗಿ ಓಟಕಿತ್ತರೆ,ಅಂಗಡಿ,ಮುಂಗಟ್ಟುಗಳು ಒಂದೇ ಸವನೆ ಮುಚ್ಚಲ್ಪಟ್ಟಿತು.ಪರಿಣಾಮ ಕೆಲವರಿಗೆ ದಿನಬಳಕೆವಸ್ತು,ತರಕಾರಿ ಸಿಗದೆ ಬರಿಗೈಯಲ್ಲಿ ಕಾನ್ಸ್ ಟೇಬಲ್ ಗೆ ಹಿಡಿಶಾಪ ಹಾಕಿ ವಾಪಾಸ್ಸಾದರು.
ಹಾಗೆಯೇ ಕೊಟ್ಟಮಣಗಂಡಿಯಲ್ಲಿ ಹಾಲು ವಿತರಕರೊರ್ವರು ಅಂಗಡಿ ತೆರೆದು ಹಾಲು ಮಾರಾಟ ಮಾಡುತ್ತಿದ್ದರು.ಅಲ್ಲಿಗೂ ಅಗಮಿಸಿದ ಕಾನ್ಸ್ ಟೇಬಲ್ ಹಾಲುವಿತರಣೆಯ ಅಂಗಡಿಯನ್ನು ಮುಚ್ಚಿಸಿದರು.ಒಂದೆಡೆ ಜಿಲ್ಲಾಡಳಿತ ಹಾಲು ವಿತರಣೆ,ಖರೀದಿಗೆ ಮತ್ತು ತರಕಾರಿ ,ದಿನಸಿ ಅಂಗಡಿಗಳನ್ನು ಬಲವಂತವಾಗಿ ಮುಚ್ಚಿಸದಂತೆ ಟಾಂಟಾಂ ಮಾಡುತ್ತಿದೆ.ಆದರೆ ಬಂಟ್ವಾಳದಲ್ಲಿ ಈ ಎಲ್ಲಾ ಅಂಗಿಡಿಯನ್ನು ಪೊಲೀಸರ ಮೂಲಕ ಮುಚ್ಚಿಸಿರುವುದರಿಂದ ಜನರು ಗೊಂದಲಕ್ಕೊಳಗಾಗುವಂತಾಯಿತು.
ಮೊಟ್ಟೆಗೂ 5 ರೂ. :
ಲಾಕ್ ಡೌನ್ ಹಿನ್ನಲೆಯಲ್ಲಿ ಅಗತ್ಯ ವಸ್ತುಗಳಿಗೆ ದರ ಹೆಚ್ಚಿಸದಂತೆ ಜಿಲ್ಲಾಡಳಿತ,ಜನಪ್ರತಿನಿಧಿಗಳು ಸಭೆ ನಡೆಸಿ ಆದೇಶ ಹೊರಡಿಸುತ್ತದೆ. ಆದರೆ ಭಾನುವಾರ ತರಕಾರಿ ಸಹಿತ ಕೆಲ ಅಗತ್ಯವಸ್ತುಗಳಿಗೆ ದುಪ್ಪಟ್ಟುದರ ವಸೂಲಿಮಾಡಲಾಗುತಿತ್ತು.ವಿಶೇಷವೆಂದರೆ ಎರಡು ರೂ.ವಿನ ಒಂದು ಮೊಟ್ಟೆಯ ದರ 5 ರೂ.ಗೆ ಏರಿಕೆಯಾಗಿತ್ತು. ಜನರಿಗೆ ಅಗತ್ಯವಿದ್ದ ಕಾರಣ ಅಷ್ಟು ಬೆಲೆ ತೆತ್ತು ಖರೀದಿಸುವುದು ಅನಿವಾರ್ಯವಾಗಿತ್ತು.
ಸ್ಟಾಕ್ ಇಲ್ಲ:
ಕೆಲ ದಿನಸಿ ಅಂಗಡಿಗಳಲ್ಲಿ ದಿನಬಳಕೆ ವಸ್ತುಗಳು ದಾಸ್ತಾನಿಲ್ಲದೆ ಕಾರಣ ಅಂಗಡಿಯನ್ನು ತೆರೆಯಲಿಲ್ಲ ಎಂದು ಕೆಲ ವರ್ತಕರು ತಿಳಿಸಿದ್ದಾರೆ.ದಿನಬಳಕೆ ವಸ್ತುಗಳ ಸಾಗಾಟಕ್ಕೆ ಕೆಲವೆಡೆ ಪೊಲೀಸರು ಅಡ್ಡಿ ಪಡಿಸುವದರಿಂದ ದಾಸ್ತಾನಿಡಲು ಸಾಧ್ಯವಾಗಿಲ್ಲ ಎನ್ನುತ್ತಾರೆ ವರ್ತಕರು. ಔಷಧ ಅಂಗಡಿಗೆ ಕ್ಯೂ: ಬಂಟ್ವಾಳದ ಎಲ್ಲ ಔಷಧ ಅಂಗಡಿಗಳು ಹತ್ತುಗಂಟೆಯವರೆಗೆ ತೆರೆದಿದ್ದು,ಎಲ್ಲ ಅಂಗಡಿಗಳ ಮುಂದೆಯು ಜನರು ಸರತಿಸಾಲಿನಲ್ಲಿ ಬಂದು ಔಷಧಿ ಖರೀದಿಸುತ್ತಿದ್ದ ದೃಶ್ಯ ಕಂಡುಬಂತು.
ರಸ್ತೆ ಬಂದ್ : ರಾಯಿಗ್ರಾಪಂ ವ್ಯಾಪ್ತಿಯ ಕೈತ್ರೋಡಿಯಲ್ಲಿ ಲಾಕ್ ಡೌನ್ ಹಿನ್ನಲೆಯಲ್ಲಿ ಅನಗತ್ಯವಾಗಿ ವಾಹನಗಳಲ್ಲಿ ಓಡಾಡುವುದನ್ನು ತಡೆಯುವ ನಿಟ್ಟಿನಲ್ಲಿ ಸ್ಥಳೀಯರು ರಸ್ತೆ ಸಂಪರ್ಕವನ್ನು ಬಂದ್ ಮಾಡಿ ಗಮನಸೆಳೆದರು.ಹತ್ತು ತಿಂಗಳ ಕಂದಮ್ಮನಿಗೆ ಕೊರೋನಾ ಧೃಢಪಟ್ಟ ಸಜೀಪನಡು ಗ್ರಾಮ ಭಾನುವಾರವು ಸಂಪೂರ್ಣ ಬಂದ್ ಆಗಿತ್ತು.
