ಬಂಟ್ವಾಳ: ದುಬಾಯಿನಿಂದ ಮಂಗಳೂರಿಗೆ ಆಗಮಿಸಿದ್ದ ವ್ಯಕ್ತಿಗೆ ಜ್ವರ ಇದ್ದ ಕಾರಣ ಕೊರೊನಾ ಭೀತಿಯಿಂದ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲ್ಪಟ್ಟು ತಪ್ಪಿಸಿಕೊಂಡಿದ್ದ ವ್ಯಕ್ತಿ ಸೋಮವಾರ ಸಂಜೆ ವಿಟ್ಲದಲ್ಲಿ ಪತ್ತೆಯಾಗಿದ್ದಾರೆ. ಅವರು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ತೆರಳುವುದಕ್ಕೆ ನಿರಾಕರಿಸಿದ ಹಿನ್ನೆಲೆಯಲ್ಲಿ ಅವರನ್ನು ಮುಂದಿನ ೪೮ ಗಂಟೆಗಳ ಕಾಲ ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿರಿಸಲು ಆರೋಗ್ಯ ಇಲಾಖೆ ತೀರ್ಮಾನಿಸಿದೆ. ಅದಕ್ಕಾಗಿ ಬಂಟ್ವಾಳ ಆಸ್ಪತ್ರೆಯಲ್ಲಿ ಪ್ರತ್ಯೇಕ ನಾಲ್ಕು ಬೆಡ್ ಗಳ ಐಸೊಲೇಶನ್ ವಾರ್ಡ್ ಮಾಡಲಾಗಿದ್ದು, ಅದರಲ್ಲಿರಿಸಿ ತೀವ್ರ ನಿಗಾ ವಹಿಸಲಾಗುತ್ತದೆ.ಅವರ ಗಂಟಲು ದ್ರವದ ವೈರಾಣು ಪರೀಕ್ಷೆಗಾಗಿ ಬೆಂಗಳೂರಿಗೆ ಕಳುಹಿಸಲಾಗಿದ್ದು, ಅದರ ವರದಿ ೪೮ ಗಂಟೆಗಳಲ್ಲಿ ಸಿಗಲಿದ್ದು, ಅಲ್ಲಿಯವರೆಗೆ ಬಂಟ್ವಾಳ ಆಸ್ಪತ್ರೆಯಲ್ಲೇ ಇರುತ್ತಾರೆ. ವರದಿಯ ಆಧಾರದಲ್ಲಿ ಮುಂದಿನ ಕ್ರಮಕೈಗೊಳ್ಳಲಾಗುತ್ತದೆ ಎಂದು ಬಂಟ್ವಾಳ ತಾಲೂಕು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.
