ಕಟೀಲು:ಇತಿಹಾಸ ಪ್ರಸಿದ್ಧ ಕಟೀಲು ದುರ್ಗಾಪರಮೇಶ್ವರಿ ದೇವಳದಲ್ಲಿ ಬ್ರಹ್ಮಕಲಶೋತ್ಸವದ ಸಂಭ್ರಮ. ಕಳೆದ ಜ. 22ರಿಂದ ಪ್ರಾರಂಭಗೊಂಡಿರುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಫೆ. 3ರವರೆಗೆ ನಿರಂತರ ನಡೆಯಲಿವೆ. ಬ್ರಹ್ಮಕಲಶೋತ್ಸವ ಹಿನ್ನೆಲೆಯಲ್ಲಿ ಪುಣ್ಯ ಕ್ಷೇತ್ರಕ್ಕೆ ನಿತ್ಯ ಸಾವಿರಾರು ಭಕ್ತರು, ಪ್ರವಾಸಿಗರು ಭೇಟಿ ಕೊಡುತ್ತಿದ್ದು ಭಕ್ತಿ ಭಾವದಲ್ಲಿ ಮಿಂದು ಪುನೀತರಾಗುತ್ತಿದ್ದಾರೆ.
ನಿರಂತರ ಅನ್ನದಾನ, ಭಕ್ತರಿಗೆ ಬೇಕಾದ ವ್ಯವಸ್ಥೆ ಕಲ್ಪಿಸುವ ಮೂಲಕ ಬ್ರಹ್ಮಕಲಶೋತ್ಸವ ಸಮಿತಿಯೂ ಸೇರಿದಂತೆ ವಿವಿಧ ಸಮಿತಿಗಳು ಕಾರ್ಯ ಪ್ರವೃತ್ತವಾಗಿವೆ. ಕ್ಷೇತ್ರದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಅಂತಾರಾಷ್ಟ್ರೀಯ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಏರ್ಪಡಿಸಲಾಗಿದ್ದು ದಿನೇ ದಿನೇ ಅಸಂಖ್ಯ ಭಕ್ತರನ್ನು ಸೂಜಿಗಲ್ಲಿನಂತೆ ತನ್ನತ್ತ ಸೆಳೆಯುತ್ತಿದೆ. ಕಟೀಲು ದೇವಳಕ್ಕೆ ದೇಶ ವಿದೇಶಗಳಲ್ಲಿ ಲಕ್ಷಾಂತರ ಮಂದಿ ಭಕ್ತರಿದ್ದಾರೆ. ಅವರೆಲ್ಲರೂ ಈ ಪರಮ ಪುಣ್ಯ ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಿದ್ದು ಅಹರ್ನಿಶಿ ದುಡಿಯುತ್ತಿದ್ದಾರೆ. ದೇವಿಯ ಸೇವೆಯಲ್ಲಿ ತೊಡಗಿಕೊಳ್ಳಲು ಸಾವಿರಾರು ಮಂದಿ ಸ್ವಯಂಸೇವಕರು ಹೆಸರು ನೋಂದಾಯಿಸಿಕೊಂಡಿರುವುದೇ ಇದಕ್ಕೆ ಸಾಕ್ಷಿ.
ಕ್ಷೇತ್ರದಲ್ಲಿ ಜನಮೆಚ್ಚುಗೆ ಪಡೆದ ಅಭಿವೃದ್ಧಿ ಕಾರ್ಯಗಳು:
ನೀವು ಕೆಲವು ಸಮಯದ ಹಿಂದೆ ಕಟೀಲು ದೇವಳಕ್ಕೆ ಬಂದಿದ್ದರೆ ಇಂದಿಗೂ ಅಂದಿಗೂ ಬಹಳಷ್ಟು ವ್ಯತ್ಯಾಸವಿದೆ. ಇದಕ್ಕೆ ಕಾರಣ ದೇವಾಲಯದಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳು. ಸಂಸದ ನಳಿನ್ ಕುಮಾರ್ ಕಟೀಲು ಮುಂದಾಳತ್ವದಲ್ಲಿ ಇಲ್ಲಿನ ರಥಬೀದಿಯನ್ನು ಅಗಲಗೊಳಿಸಲಾಗಿದೆ. ಹಿಂದೆ ತೀರಾ ಕಿರಿದಾಗಿದ್ದ ಇಲ್ಲಿನ ಪ್ರಧಾನ ರಸ್ತೆ ಇಂದು ದ್ವಿಪಥ ರಸ್ತೆಯಂತೆ ಶೋಭಿಸುತ್ತಿದೆ. ಇದರಿಂದ ಪ್ರವಾಸಿಗರು, ಭಕ್ತರ ಓಡಾಟಕ್ಕೆ ಯಾವುದೇ ಸಮಸ್ಯೆಯಿಲ್ಲ. ದೇವಾಲಯದ ಮುಂಭಾಗದ ಹೋಟೆಲ್, ಅಂಗಡಿ ಮಳಿಗೆಗಳನ್ನು ಖರೀದಿಸಿ ಅದನ್ನು ನೆಲಸಮ ಮಾಡಿ ರಥಬೀದಿ ಅಗಲಗೊಳಿಸಲಾಗಿದೆ. ಇದರಿಂದ ಕ್ಷೇತ್ರದ ಮೆರುಗು ಹೆಚ್ಚಿದ್ದು ಭಕ್ತರ ಪ್ರಶಂಸೆಗೂ ಪಾತ್ರವಾಗಿದೆ.
ಶುಚಿ ರುಚಿಯಾದ ಊಟ, ತಿಂಡಿ:
ಕಟೀಲು ದೇವಾಲಯದಲ್ಲಿ ಪ್ರತಿನಿತ್ಯ ಬೆಳಗ್ಗೆ ಯಿಂದ ಹಿಡಿದು ರಾತ್ರಿ ತನಕ ಶುಚಿ ರುಚಿಯಾದ ಊಟ ತಿಂಡಿಯ ವ್ಯವಸ್ಥೆಯನ್ನು ಮಾಡಲಾಗಿದೆ. ಉತ್ತಮ ಗುಣಮಟ್ಟದ ಊಟೋಪಚಾರ ನಿರಂತರ ಅನ್ನಛತ್ರದಲ್ಲಿ ದೊರೆಯುತ್ತಿದ್ದು ಒಮ್ಮೆಲೇ 25,000 ಮಂದಿ ಕೂತು ಅನ್ನದಾನ ಸ್ವೀಕರಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಇನ್ನು ಇಲ್ಲೇ ಬಫೆ ಕೌಂಟರ್ ಇದ್ದು ಸ್ವಯಂಸೇವಕರು ಊಟೋಪಚಾರದ ವ್ಯವಸ್ಥೆಯಲ್ಲಿ ನಿರತರಾಗಿದ್ದಾರೆ.
ನಾಳೆ ವೈಭವದ ಬ್ರಹ್ಮಕಲಶೋತ್ಸವ:
ಕಟೀಲು ಅಮ್ಮನ ಸನ್ನಿಧಿಯಲ್ಲಿ ನಾಳೆ ಜ. 30ರಂದು ವೈಭವದ ಬ್ರಹ್ಮಕಲಶೋತ್ಸವ ನಡೆಯಲಿದೆ. ಲಕ್ಷಾಂತರ ಮಂದಿ ಭಕ್ತರು ಈ ಪುಣ್ಯ ಕಾರ್ಯದಲ್ಲಿ ಪಾಲು ಪಡೆಯುವ ನಿರೀಕ್ಷೆಯಿದ್ದು ದೇವಳದಲ್ಲಿ ಎಲ್ಲ ರೀತಿಯ ವ್ಯವಸ್ಥೆಗಳು ಪೂರ್ಣಗೊಂಡಿವೆ. ಬಳಿಕ ಫೆ. 1-2ರಂದು ಕೋಟಿ ಜಪಯಜ್ಞ, ನಂತರ ಚಂಡಿಕಾಯಾಗ ನೆರವೇರಲಿದೆ. ದೇವಳದಲ್ಲಿ ಭಕ್ತರ ದಂಡೇ ನೆರೆಯುತ್ತಿದ್ದು ಅನ್ನಪೂರ್ಣೆಯ ಕೃಪೆಗೆ ಪಾತ್ರರಾಗುತ್ತಿದ್ದಾರೆ.

