ಮೂಡುಬಿದಿರೆ :ರಿಜುವನೇಟ್ ಚೈಲ್ಡ್ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮೂಡುಬಿದಿರೆ ಇದರ ಅಂಗ ಸಂಸ್ಥೆ ಸ್ಫೂರ್ತಿ ಭಿನ್ನ ಸಾಮಥ್ರ್ಯದ ಮಕ್ಕಳ ಶಾಲೆ ಮತ್ತು ತರಬೇತಿ ಕೇಂದ್ರದ ವಾರ್ಷಿಕೋತ್ಸವವು ಸಮಾಜ ಮಂದಿರ ಸಭಾದ ಸ್ವರ್ಣ ಮಂದಿರದಲ್ಲಿ ನಡೆಯಿತು.
ಶಾಸಕ ಉಮಾನಾಥ ಕೋಟ್ಯಾನ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಮುಗ್ಧತೆಯನ್ನು ಹೊಂದಿರುವ ಮಕ್ಕಳು ವಿಕಲಚೇತನರು. ಬೇರೆ ಬೇರೆ ರೀತಿಯಲ್ಲಿ ಅಂಗವಿಕಲತೆಯನ್ನು ಹೊಂದಿರುವ ಈ ಮಕ್ಕಳಿಗೆ ಶಕ್ತಿ ತುಂಬಿ ಮುಖ್ಯವಾಹಿನಿಗೆ ತರಬೇಕೆಂಬ ಉದ್ದೇಶದಿಂದ ಸ್ಫೂರ್ತಿ ಸಂಸ್ಥೆಯ ಪ್ರಕಾಶ್ ಶೆಟ್ಟಿಗಾರ್ ಅವರು ಸದಾ ಶ್ರಮಿಸುತ್ತಿದ್ದಾರೆ. ಶಾಲೆಗೆ ಕಂಬಳ ಸಮಿತಿಯಿಂದ ರೂ ಲಕ್ಷವನ್ನು ಕೊಡಲು ಸಮಿತಿಯಲ್ಲಿ ಪ್ರಾಸ್ತಾಪಿಸಲಾಗುವುದು ಎಂದರು.
ದ.ಕ.ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಕಲ್ಯಾಣಧಿಕಾರಿ ಯಮುನಾ ಡಿ. ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಗೆ ಸಹಕಾರವನ್ನು ನೀಡಿರುವ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಉಡುಪಿ ಅದಾನಿ ಯು.ಪಿ.ಸಿ.ಎಲ್. ಗ್ರೂಪ್ನ ಅಧ್ಯಕ್ಷ ಕಿಶೋರ್ ಆಳ್ವ, ಉದ್ಯಮಿ ಕೆ.ಶ್ರೀಪತಿ ಭಟ್, ಬೆಳ್ಮಣ್ನ ಹ್ಯೂಮ್ಯಾನಿಟಿ ಟ್ರಸ್ಟ್ನ ಸಂಸ್ಥಾಪಕ ರೋಶನ್ ಬೆಳ್ಮಣ್, ಮೂಡುಬಿದಿರೆ ರೋಟರಿ ಕ್ಲಬ್ ಅಧ್ಯಕ್ಷ ಸಿ.ಹೆಚ್.ಗಫೂರ್, ಇನ್ನರ್ವೀಲ್ ಕ್ಲಬ್ ಅಧ್ಯಕ್ಷೆ ಜ್ಯೋತಿ ಪೈ, ಸಂಸ್ಥೆಯ ಟ್ರಸ್ಟಿ ಗೋಪಾಲ್ ಎಂ.ಶೆಟ್ಟಿಗಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ರಿಜ್ಯುವನೇಟ್ ಚೈಲ್ಡ್ ಫೌಂಡೇಶನ್ ಸಂಸ್ಥಾಪಕ ಪ್ರಕಾಶ್ ಜೆ.ಶೆಟ್ಟಿಗಾರ್ ಸ್ವಾಗತಿಸಿದರು. ಸಂಸ್ಥೆಯ ಪರವಾಗಿ ಅಶ್ವಿನ್ ಜೆ. ಪಿರೇರಾ ಮಾತನಾಡಿ, ಸಂಸ್ಥೆಯಲ್ಲಿ 58 ವಿಶೇಷ ವಿದ್ಯಾರ್ಥಿಗಳಿದ್ದಾರೆ. ಆದರೆ ಸ್ವಂತ ನಿವೇಶನ ಮತ್ತು ಮಕ್ಕಳನ್ನು ದೂರದೂರುಗಳಿಂದ ಕರೆದುಕೊಂಡು ಬರಲು ವಾಹನ ವ್ಯವಸ್ಥೆಯ ಕೊರತೆಯಿದ್ದು ಇದನ್ನು ಶಾಸಕರು ಮತ್ತು ಅದಾನಿ ಗ್ರೂಪ್ನವರು ಭರಿಸಿಕೊಡುವಂತೆ ಮನವಿ ಸಲ್ಲಿಸಿದರು.
ಶಿಕ್ಷಕಿ ರಮ್ಯಶ್ರೀ ವಾರ್ಷಿಕ ವರದಿ ವಾಚಿಸಿದರು. ರೋಹನ್ ಅತಿಕಾರಬೆಟ್ಟು ಕಾರ್ಯಕ್ರಮ ನಿರೂಪಿಸಿದರು. ಸುಚಿತ್ರಾ ವಂದಿಸಿದರು.
ನಂತರ ವಿಶೇಷ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ಪ್ರಸ್ತುತಗೊಂಡಿತು. ಭಕ್ತಿಶ್ರೀ ಆಚಾರ್ಯ ಸಾಂಸ್ಕøತಿಕ ಕಾರ್ಯಕ್ರಮ ನಿರೂಪಿಸಿದರು.

