ಮೂಡುಬಿದಿರೆ:ಅನಾರೋಗ್ಯ ಪೀಡಿತ ಮೂವರಿಗೆ ತುಳುನಾಡ ಪೊರ್ಲು ಸೇವಾ ಟ್ರಸ್ಟ್‍ನಿಂದ 41ನೇ ತಿಂಗಳ ಮಾಸಿಕ ಸೇವಾ ಯೋಜನೆಯಾಗಿ ಮೂಡುಬಿದಿರೆ ಪ್ರೆಸ್‍ಕ್ಲಬ್ ವಠಾರದಲ್ಲಿ ಭಾನುವಾರ ಆರ್ಥಿಕ ನೆರವು ನೀಡಲಾಯಿತು.

108 ಸೇವಾ ಯೋಜನೆಯಾಗಿ ಕೇಮ್ರಾಲ್ ಪಕ್ಷಿಕೆರೆ ಸಮೀಪದ ಹೊಸಕಾಡಿನಲ್ಲಿ ತಲೆಯ ನರದ ಸಮಸ್ಯೆಯಿಂದ ಬಳಲುತ್ತಿರುವ ಲಿಲ್ಲಿ ಜೇರೋಯಿಡ್ ಡಿಸೋಜ ಅವರಿಗೆ ಧನಸಹಾಯ ಮಾಡಲಾಯಿತು. 109ನೇ ಸೇವಾ ಯೋಜನೆಯಾಗಿ ಎರಡು ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಕಾರ್ಕಳ ಬೋರ್ಕಟ್ಟೆಯ ಪ್ರದೀಪ್ ಶೆಟ್ಟಿ ಹಾಗೂ 110ನೇ ಸೇವಾ ಯೋಜನೆಯಾಗಿ ಪಾಳುಬಿದ್ದ ಸುರತ್ಕಲ್ ಕಾಟಿಪಳ್ಳಸ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿರುವ ವೃದ್ಧೆ ಲಕ್ಷ್ಮೀ ಅವರಿಗೆ ಧನಸಹಾಯ ಹಸ್ತಾಂತರಿಸಲಾಯಿತು. ಪತ್ರಕರ್ತ ಅಶ್ರಫ್ ವಾಲ್ಪಾಡಿ ಧನಸಹಾಯ ಹಸ್ತಾಂತರಿಸಿ ಮಾತನಾಡಿ, ಸಾಮಾನ್ಯ ಕೆಲಸಗಳನ್ನು ಮಾಡಿಕೊಂಡು ತಮ್ಮ ಆದಾಯದ ಒಂದು ಭಾಗವನ್ನು ತುಳುನಾಡ ಪೊರ್ಲು ಸೇವಾ ಟ್ರಸ್ಟ್ ಹೆಸರಿನೊಂದಿಗೆ ಅನಾರೋಗ್ಯ ಪೀಡಿತರು, ಅಶಕ್ತರಿಗೆ ನೀಡುತ್ತಿರುವ ಸದಸ್ಯರ ಸೇವೆ ಶ್ಲಾಘನೀಯ. ಸಹಾಯ ಪಡೆದುಕೊಂಡವರು ನೀಡಿದವರ ತ್ಯಾಗ್ಯ, ನೈಜ್ಯ ಸೇವೆಯನ್ನು ಮರೆಯಬಾರದು ಎಂದು ತಿಳಿಸಿದರು.
ಮೂಡುಬಿದಿರೆ ಪ್ರೆಸ್‍ಕ್ಲಬ್ ಕೋಶಾಧಿಕಾರಿ ಎಂ.ಗಣೇಶ್ ಕಾಮತ್, ಸದಸ್ಯೆ ಪ್ರೇಮಶ್ರೀ ಕಲ್ಲಬೆಟ್ಟು, ಆರದಿರಲಿ ಬದುಕು ಆರಾಧನ ಸೇವಾ ಸಂಸ್ಥೆಯ ಸದಸ್ಯೆ ಪದ್ಮಶ್ರೀ ಭಟ್ ನಿಡ್ಡೋಡಿ ಉಪಸ್ಥಿತರಿದ್ದರು.
