ಬಂಟ್ವಾಳ: ಬಂಟ್ವಾಳ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಲಡ್ಕ ಸಮೀಪದ ಪುರ್ಲಿಪ್ಪಾಡಿ ಎಂಬಲ್ಲಿ ಗುರುವಾರ ಮುಂಜಾನೆ ಅಕ್ರಮ ಗೋಸಾಗಾಟದ ಪಿಕ್ ಅಪ್ ಪಲ್ಟಿಯಾಗಿದ್ದು ಅಕ್ರಮ ಗೋಸಾಗಟಾಗಾರರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಾಲೆತ್ತೂರು ನಿವಾಸಿ ಬಶೀರ್ ಹಾಗೂ ಅಬೂಬಕರ್ ಸಿದ್ದೀಕ್ ಎಂದು ಹೆಸರಿಸಲಾಗಿದೆ. ಈ ಪೈಕಿ ವಾಹನ ಚಾಲಕ ಪರಾರಿಯಾಗಿದ್ದಾನೆ.
ಗುರುವಾರಮುಂಜಾನೆ ಪಿಕ್ ಅಪ್ ವಾಹನದಲ್ಲಿ ಗೋವುಗಳನ್ನು ಹೇರಿಕೊಂಡು ಕುದ್ರೋಳಿಯ ಕಸಾಯಿಖಾನೆಗೆ ಸಾಗಿಸಲಾಗುತ್ತಿತ್ತು. ಈ ಬಗ್ಗೆ ಮಾಹಿತಿ ಪಡೆದಿದ್ದ ಹಿಂದೂ ಸಂಘಟನೆಗೆ ಸೇರಿದ ಸುಮಾರು 20ಕ್ಕೂ ಹೆಚ್ಚು ಕಾರ್ಯಕರ್ತರು ಮಾರುತಿ 800 ಕಾರ್ ಮತ್ತು ಬೈಕ್ನಲ್ಲಿ ಬೆನ್ನಟ್ಟಿ ಬಂದಿದ್ದರು. ಇದರಿಂದ ಗಲಿಬಿಲಿಗೊಂಡ ಯುವಕರು ಟೆಂಪೋವನ್ನು ಅತೀವೇಗವಾಗಿ ಕೊಂಡೊಯ್ದಿದ್ದು ಚಾಲಕನ ನಿಯಂತ್ರಣ ಕಳೆದುಕೊಂಡ ವಾಹನ ಕುದ್ರೆಬೆಟ್ಟು-ಪುರ್ಲಿಪ್ಪಾಡಿ ರಸ್ತೆ ಪಕ್ಕದ ಕಮರಿಗೆ ಪಲ್ಟಿಯಾಗಿದೆ.
ಕೂಡಲೇ ಚಾಲಕ ಪರಾರಿಯಾಗಿದ್ದು, ಗಾಯಗೊಂಡಿದ್ದ ಬಶೀರ್ ಹಾಗೂ ಅಬೂಬಕರ್ ಸಿದ್ದೀಕ್ನನ್ನು ಹಿಗ್ಗಾಮುಗ್ಗಾ ಥಳಿಸಿ ಪೊಲೀಸ್ ವಶಕ್ಕೆ ಒಪ್ಪಿಸಿದ್ದಾರೆ. ಅಲ್ಲದೆ ಗೋಸಾಗಾಟಗಾರರ ಮೇಲೆ ತಲವಾರು ದಾಳಿ ನಡೆದಿದೆ ಎನ್ನಲಾಗಿದೆ. ಬಂಟ್ವಾಳ ನಗರ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಸ್ಥಳೀಯ ನಿವಾಸಿಯನ್ನು ಪೊಲೀಸರು ಬಂಧಿಸಿದ್ದಾರೆ. ಒಂದು ಬೈಕ್ ಹಾಗೂ ಕಾರನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.










