ಆರೋಪಿಗೆ ಜಾಮೀನು ನೀಡಿದ್ದು ಯಾಕೆ?
ಬಂಟ್ವಾಳ: ವಿದ್ಯಾರ್ಥಿನಿಯೋರ್ವಳು ಕಾಲೇಜಿನಿಂದ ಸಂಜೆ ಮನೆಗೆ ಹಿಂದಿರುಗುತ್ತಿದ್ದ ವೇಳೆ ಕೈ ಹಿಡಿದೆಳೆದು ಅತ್ಯಾಚಾರಕ್ಕೆ ಯತ್ನಿಸಿದ್ದಲ್ಲದೆ ಕೊಲೆ ಬೆದರಿಕೆಯೊಡ್ಡಿದ ಆರೋಪದಡಿ ಪೊಲಿಸರಿಂದ ಬಂಧಿತನಾದ ಆರೋಪಿ ಸಂಗಬೆಟ್ಟು ಕೆರೆಬಳಿ ನಿವಾಸಿ ಅಬ್ಬಾಸ್ ಎಂಬವರ ಪುತ್ರ ಸಿರಾಜ್ ಗೆ ಯಾವುದೇ ಶಿಕ್ಷೆ ವಿಧಿಸದೆ ಮಧ್ಯಂತರ ಜಾಮಿನೀನ ಮೇಲೆ ಬಿಡುಗಡೆಗೊಳಿಸಿರುವುದನ್ನು ಖಂಡಿಸಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಬುಧವಾರ ಸಿದ್ದಕಟ್ಟೆಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಘಟನೆಯನ್ನು ಖಂಡಿಸಿ ಸಿದ್ದಕಟ್ಟೆಯಲ್ಲಿ ವ್ಯಾಪಾರಿಗಳು ಬೆಳಗ್ಗಿನಿಂದಲೇ ಅಂಗಡಿಗಳ ಬಾಗಿಲು ತೆರೆಯದೇ ಸ್ವಯಂಪ್ರೇರಿತರಾಗಿ ಬಂದ್ ಆಚರಿಸಿದರು. ರಿಕ್ಷಾ ಮೊದಲಾದ ವಾಹನ ಚಾಲಕರು ಸಂಚಾರ ಸ್ಥಗಿತಗೊಳಿಸಿ ಪ್ರತಿಭಟನೆಗೆ ಬೆಂಬಲ ನೀಡಿದರು. ಬಂಟ್ವಾಳದ ಖಾಸಗಿ ಕಾಲೇಜಿನ ವಿದ್ಯಾರ್ಥಿನಿ ಸಂಗಬೆಟ್ಟುವಿನ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿ ಸಿರಾಜ್ ಆಕೆಯ ಕೈ ಹಿಡಿದೆಳೆದು ಮನಭಂಗಕ್ಕೆ ಯತ್ನಿಸಿಸಿದ್ದ. ಈ ಸಂದರ್ಭ ಆಕೆ ಬೊಬ್ಬೆ ಹೊಡೆದಾಗ ಆಕೆಯ ಚಿಕ್ಕಪ್ಪ ಬರುತ್ತಿರುವುದನ್ನು ಗಮನಿಸಿ ಆರೋಪಿ ಕೊಲೆ ಬೆದರಿಕೆಯೊಡ್ಡಿ ಪರಾರಿಯಾಗಿದ್ದ. ಈ ಹಿಂದೆಯೂ ಆರೋಪಿ ಯುವತಿಗೆ ಎರಡು ಬಾರಿ ಚುಡಾಯಿಸಿದ್ದು ಯುವತಿ ಮಾನ, ಪ್ರಾಣಕ್ಕೆ ಅಂಜಿ ಪೊಲೀಸರಿಗೆ ದೂರು ನೀಡಿರಲಿಲ್ಲ ಎಂದು ತಿಳಿದುಬಂದಿದೆ.
ವಿದ್ಯಾರ್ಥಿಯ ಮೇಲೆ ನಡೆದ ಮಾನಭಂಗ ಯತ್ನ ಪ್ರಕರಣವನ್ನು ವಿರೋಧಿಸಿ ಸಿದ್ದಕಟ್ಟೆ ಜಂಕ್ಷನ್ ನಲ್ಲಿ ಪ್ರತಿಭಟನಾ ಸಭೆ ನಡೆಯಿತು. ರಾಜಕೀಯ ಕುಮ್ಮಕ್ಕಿನಿಂದ ಆರೋಪಿಗೆ ಶಿಕ್ಷೆಯಾಗದೆ ಬಿಡುಗಡೆಯಾಗುವಂತಾಗಿದೆ. ಆತನನ್ನು ಮತ್ತೆ ಬಂಧಿಸಿ ಕಾನೂನಿನಡಿ ಸೂಕ್ತ ಶಿಕ್ಷೆ ಒದಗಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು. ಆರೋಗ್ಯ ಸಚಿವ ಯು.ಟಿ.ಖಾದರ್ ಆರೋಪಿಯ ಬಿಡುಗಡೆಗೆ ಪ್ರಯತ್ನಿಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದು ಯು.ಟಿ.ಖಾದರ್ ಅವರ ಭಾವಚಿತ್ರ ಪ್ರದರ್ಶಿಸಿ ಧಿಕ್ಕಾರ ಕೂಗಿದರು.
ಮಾನಭಂಗ ಯತ್ನಕ್ಕೆ ಒಳಗಾದ ವಿದ್ಯಾರ್ಥಿನಿಯ ಸಹಪಾಠಿಯೋರ್ವಳು ಮಾತನಾಡಿ, `ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಹಾಡುಹಗಲೇ ಆತಂಕದ ಸ್ಥಿತಿ ನಿರ್ಮಾಣವಾಗಿದ್ದು ಹೆಣ್ಣುಮ್ಮಕ್ಕಳು ನಡೆದಾಡಿಕೊಂಡು ಹೋಗಲು ಭಯ ಪಡುವಂತಾಗಿದೆ. ಆರೋಪಿಯೊಂದಿಗೆ ಆತನನ್ನು ಬಿಡುಗಡೆಗೆ ತೆರೆಮರೆಯಲ್ಲಿ ಕೆಲಸ ಮಾಡಿರುವವರಿಗೂ ಸರಿಯಾಗಿ ಬುದ್ದಿಕಲಿಸಬೇಕು. ಆರೋಪಿಗೆ ಶಿಕ್ಷೆಯಾಗುವರೆಗೂ ನಿರಂತರ ಹೋರಾಟಕ್ಕೆ ಸಿದ್ಧ’ ಎಂದು ಆಕ್ರೋಶಭರಿತಳಾಗಿ ನುಡಿದಳು.
ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಬಿಜೆಪಿ ಮುಖಂಡರಾದ ರಾಜೆಶ್ ನಾಯ್ಕ್ ಉಳಪಾಡಿಗುತ್ತು, ತುಂಗಪ್ಪ ಬಂಗೇರಾ, ಜಿ.ಆನಂದ, ಜಗದೀಶ ಅಧಿಕಾರಿ. ಸುಲೋಚನಾ ಭಟ್, ಜಿಲ್ಲಾ ಪಂಚಾಯತ್ ಸದಸ್ಯೆ ನಳಿನಿ ಶೆಟ್ಟಿ, ತಾಲೂಕು ಪಂಚಾಯತ್ ಸದಸ್ಯ ವಸಂತ ಅಣ್ಣಳಿಕೆ ವಿಶ್ವ ಹಿಂದೂ ಪರಿಷತ್ನ ಜಿಲ್ಲಾ ಕಾರ್ಯರ್ಧಯಕ್ಷ ಜಿತೇಂದ್ರ ಕೊಟ್ಟಾರಿ ಮತ್ತಿತರರು ವೇದಿಕೆಯಲ್ಲಿದ್ದರು. ಸಾವಿರಾಋರು ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಸಭೆಯಲ್ಲಿ ಬಾಗವಹಿಸಿದ್ದರು. ವಿವಿಧ ಕಾಲೇಜುಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದರು.
ನ್ಯಾಯಾಂಗ ಬಂಧನ:
ಪೊಲೀಸರ ಎಡವಟ್ಟಿನಿಂದಾಗಿ ಮಧ್ಯಂತರ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದ ಆರೋಪಿ ಸಿರಾಜ್ ನನ್ನು ಬುಧವಾರ ಮತ್ತೆ ನಾಯಾಲಯಕ್ಕೆ ಹಾಜರುಪಡಿಸಲಾಯಿತು. ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದ್ದಾರೆ. ಈ ವಿಚಾರವನ್ನು ಪ್ರತಿಭಟನಾ ಸಭೆಯಲ್ಲಿ ಬಂಟ್ವಾಳ ಪೊಲೀಸ್ ವೃತ್ತ ನಿರೀಕ್ಷ ಬೆಳ್ಳಿಯಪ್ಪ ಘೋಷಿಸಿದರು. ಬಳಿಕ ಪ್ರತಿಭಟನೆಯನ್ನು ಮುಕ್ತಾಯಗೊಳಿಸಲಾಯಿತು.
ಚಿತ್ರೀಕರಣ ಮಾಡುತ್ತಿದವನಿಗೆ ಗೂಸಾ:
ಪ್ರತಿಭಟನಾ ಸಭೆಯ ದೃಶ್ಯಗಳನ್ನು ತನ್ನ ಮೊಬೈಲ್ ಮೂಲಕ ಚಿತ್ರೀಕರಣ ಮಾಡುತ್ತಿದ್ದ ಅನ್ಯಕೋಮಿನ ಯುವಕನಿಗೆ ಈ ಸಂದರ್ಭ ಪ್ರತಿಭಟನಾನಿರತ ಯುವಕರು ಗೂಸಾ ನೀಡಿದರು. ಇದರಿಂದಾಗಿ ಕೆಲಕಾಲ ಸ್ಥಳದಲ್ಲಿ ಬಿಗುವಿನ ವಾತವರಣ ನಿರ್ಮಾಣಗೊಂಡಿತು. ತಕ್ಷಣ ಪೊಲೀಸರು ಮಧ್ಯ ಪ್ರವೇಶಿಸಿ ದೃಶ್ಯ ಸೆರೆ ಹಿಡಿಯುತ್ತಿದ್ದಾನನ್ನು ಯುವಕರ ಕೈಯಿಂದ ರಕ್ಷಿಸಿ ವಶಕ್ಕೆ ಪಡೆದುಕೊಂಡು ಪೊಲೀಸ್ ವಾಹನದ ಮೂಲಕ ಠಾಣೆಗೆ ಕರೆದೊಯ್ದರು. ಪ್ರತಿಭಟನೆ ಹಿನ್ನಲೆಯಲ್ಲಿ ಬಂದೋಬಸ್ತ್ಗಗಿ ಹೆಚ್ಚಿನ ಪೊಲೀಸರನ್ನು ಸಿದ್ದಕಟ್ಟೆಯಲ್ಲಿ ನಿಯೋಜಿಸಲಾಗಿತ್ತು. ಎಎಸ್ಪಿ ರಾಹುಲ್ ಕುಮಾರ್, ವೃತ್ತ ನಿರೀಕ್ಷಕ ಬೆಳಿಯಪ್ಪ, ನಗರ ಪೊಲೀಸ್ ಠಾಣಾ ಎಸ್ಐ ನಂದಕುಮಾರ್, ಗ್ರಾಮಾಂತರ ಠಾಣಾ ಎಸ್ಐ ನಾಗರಾಜ್, ಪುಂಜಾಲಕಟ್ಟೆ ಠಾಣಾ ಎಸ್ಐ ಲತೇಶ್ ಕುಮಾರ್ ಹಾಗೂ ಸಿಬ್ಬಂದಿ ಹಾಜರಿದ್ದರು










