ಗುರುಪುರ : ಗ್ರಾಮೀಣ ಮಟ್ಟದಲ್ಲಿ ಸ್ವಚ್ಛತೆ, ತ್ಯಾಜ್ಯ ವಿಲೇವಾರಿ, ನೀರು ಉಳಿತಾಯ, ಮತದಾನ ಅರಿವು ಮೊದಲಾದ ಗಂಭೀರ ಸಮಸ್ಯೆಗಳ ಬಗ್ಗೆ ಜನ ಜಾಗೃತಿ ಮೂಡಿಸುತ್ತಿರುವ ಗುರುಪುರ ಕೈಕಂಬದ `ಪಿಂಗಾರ’ ಕಲಾ ತಂಡ ಸೋಮವಾರ ಗುರುಪುರ ಸರ್ಕಾರಿ ಸಂಯುಕ್ತ ಪಿಯು ಕಾಲೇಜು ಸಭಾಭವನದಲ್ಲಿ `ತ್ಯಾಜ್ಯ ಸಂಹಾರ’ ಎಂಬ ಬೀದಿ ನಾಟಕದ ಚೊಚ್ಚಲ ಪ್ರಯೋಗ ನಡೆಸಿತು.
ತಾಪಂ ಅಧ್ಯಕ್ಷ ಮೊಹಮ್ಮದ್ ಮೋನು ತಮಟೆ ಬಾರಿಸಿ ಬೀದಿ ನಾಟಕಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಮೋನು, ಜಿಲ್ಲೆ ಸ್ವಚ್ಚವಾಗಿರಬೇಕಿದ್ದರೆ ಮೊದಲು ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿರಬೇಕು. ಜೀವನದಲ್ಲಿ ಪ್ರತಿಯೊಬ್ಬರೂ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದರು.
ದಕ ಜಿಪಂ ಸದಸ್ಯ ಯು ಪಿ ಇಬ್ರಾಹಿಂ ಮಾತನಾಡಿ, ಇಂತಹ ಕಲಾ ತಂಡಗಳ ಶ್ರಮಕ್ಕೆ ಬೆಲೆ ನೀಡಿದಾಗ, ವಾಸ್ತವದಲ್ಲಿ ನಾವೆಲ್ಲರೂ ಸ್ವಚ್ಚತೆ ಮೈಗೂಡಿಸಿಕೊಳ್ಳುತ್ತೇವೆ ಎಂದರ್ಥವಾಗುತ್ತದೆ. ಶಾಲಾ ಮಕ್ಕಳು ಇಂತಹ ನಾಟಕಗಳಿಂದ ಪ್ರೇರಿತರಾದರೆ ಪಾಲಕರು ಮತ್ತು ಗೆಳೆಯರಲ್ಲಿ ಸ್ವಚ್ಛತೆಯ ಅರಿವು ಮೂಡಿಸಲು ಪ್ರಯತ್ನಿಸಬೇಕು. ಎಲ್ಲೆಂದರಲ್ಲಿ ಕಸ ಎಸೆಯದೆ ಕಸದ ಬುಟ್ಟಿಗೆ ಎಸೆಯಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಗುರುಪುರ ಗ್ರಾಪಂ ಅಧ್ಯಕ್ಷೆ ರುಕಿಯಾ, ಉಪಾಧ್ಯಕ್ಷ ಜಿ ಎಂ ಉದಯ ಭಟ್, ಪ್ರೌಢಶಾಲಾ ಮುಖ್ಯ ಶಿಕ್ಷಕಿ ರೂಪ ಡಿ, ಕಾಲೇಜು ಪ್ರಭಾರ ಪ್ರಾಂಶುಪಾಲೆ ವಯೆಲ್ಲಾ ಸಿಕ್ವೇರ, ಉಪನ್ಯಾಸಕ ಈಶ್ವರ ಪೂಜಾರಿ, ಶಿಕ್ಷಕ ವೃಂದ, ವಿದ್ಯಾರ್ಥಿಗಳು ಇದ್ದರು. ಪಿಂಗಾರ ತಂಡದ ಭರತ್ ಸ್ವಾಗತಿಸಿ ನಿರೂಪಿಸಿದರು. ಸಂತೋಷ್ ಕಾರ್ಕಳ ವಂದಿಸಿದರು. ಬಳಿಕ `ತ್ಯಾಜ್ಯ ಸಂಹಾರ’ ಬೀದಿ ನಾಟಕದ ಚೊಚ್ಚಲ ಪ್ರದರ್ಶನ ನಡೆಯಿತು. ತಂಡದ ವೇಣುಗೋಪಾಲ ಬೀದಿ ನಾಟಕ ನಿರ್ವಹಿಸಿದರು.





