ಕೈಕಂಬ: ಗುರುಪುರ ಕೈಕಂಬದ ಬೆಥನಿ ಪ್ರೌಢಶಾಲಾ ಒಂಬತ್ತನೇ ತರಗತಿ ವಿದ್ಯಾರ್ಥಿನಿ ಗುರುಪುರದ ಶಿಫಾಲಿ ಪೂಜಾರಿ ಶಿಕ್ಷಣ ಇಲಾಖೆ ಪ್ರಾಯೋಜಿತ ರಿದಮಿಕ್ ಯೋಗ ಸ್ಪರ್ಧೆಯ ಸೀನಿಯರ್ ವಿಭಾಗದಲ್ಲಿ ದಕ ಜಿಲ್ಲೆಗೆ ಪ್ರಥಮ ಸ್ಥಾನಿಯಾಗಿ, ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
2017-18ರ ಸಾಲಿನಲ್ಲೂ ಈಕೆ ಜಿಲ್ಲೆಯಿಂದ ರಾಜ್ಯಕ್ಕೆ ಆಯ್ಕೆಯಾದ ಏಕೈಕ ಸ್ಪರ್ಧಾಳು. ಹಾಸನದಲ್ಲಿ ನಡೆದ ಮೈಸೂರು ಡಿವಿಜನ್ ಮಟ್ಟದ ಸ್ಪರ್ಧೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ. ಬೀದರ್‍ನ ನೆಹರೂ ಕ್ರೀಡಾಂಗಣದಲ್ಲಿ ಅ. 19ರಂದು ನಡೆಯಲಿರುವ ರಾಜ್ಯ ಮಟ್ಟದಲ್ಲಿ ರಿದಮಿಕ್ ಯೋಗ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸುವ ವಿಶ್ವಾಸ ಹೊಂದಿರುವ ಶಿಫಾಲಿ, ನೃತ್ಯ ಪ್ರಕಾರಗಳಲ್ಲಿ ಅದ್ಭುತ ಪ್ರತಿಭೆಯಾಗಿದ್ದು, ಈಗಾಗಲೇ ನೂರಾರು ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾರೆ.
ಕಳೆದ ಬಾರಿ ಕೂದಲೆಳೆ ಅಂತರದಲ್ಲಿ ಪ್ರಶಸ್ತಿಯಿಂದ ವಂಚಿತಳಾಗಿರುವ ಶಿಫಾಲಿ ಈ ಬಾರಿ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿ, ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಲಿದ್ದಾಳೆ ಮತ್ತು ದಕ ಜಿಲ್ಲೆಗೆ ಹೆಸರು ತಂದು ಕೊಡಲಿದ್ದಾಳೆ” ಎಂದು ತಂದೆ ವಿಶ್ವಾನಂದ ಪೂಜಾರಿ ಕುಳವೂರು ಮತ್ತು ತಾಯಿ ಶಶಿಕಲಾ ಎನ್ ಪೂಜಾರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.


