ಕೈಕಂಬ:ಕುಪ್ಪೆಪದವು ಮುತ್ತೂರಿನ ಕುಳವೂರು ಗ್ರಾಮದಲ್ಲಿ ಶ್ರಮದಾನದಲ್ಲಿ ತೊಡಗಿದ್ದ ಯುವಕರೊಂದಿಗೆ ಅ ರಸ್ತೆಯಲ್ಲಿ ಬೀಟ್ ಪೊಲೀಸ್ ಸಾಥ್ ನೀಡಿ ಶ್ರಮದಾನದಲ್ಲಿ ಭಾಗವಹಿಸಿದ್ದು ಸಾರ್ವಜನಿಕರಿಂದ ಶ್ಲಾಘನೆಗೆ ಪಾತ್ರವಾಗಿದೆ.ಕುಳವೂರು ಗೆಂದಡ್ಪು ಎಂಬಲ್ಲಿ ಚರಂಡಿಗೆ ಮಣ್ಣು ಬಿದ್ದು ಬ್ಲಾಕ್ ಆಗಿ ಮಳೆ ನೀರು ರಸ್ತೆಯಲ್ಲಿ ಹರಿದು ವಾಹನ ಸವಾರರು ಮತ್ತು ಜನರಿಗೆ ಸಮಸ್ಯೆಯಾಗಿತ್ತು.
ಕುಳವೂರು ಪ್ರೆಂಡ್ಸ್ ಕ್ಲಬ್ ಯುವಕರು ಶ್ರಮದಾನ ಮೂಲಕ ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿದ್ದ ವೇಳೆ ಈ ರಸ್ತೆಯಲ್ಲಿ ಬಂದ ಬಜಪೆ ಠಾಣೆಯ ಪೊಲೀಸ್ ಪೇದೆ ತಿರುಪತಿ ಚೌಹಾನ್ ಎಂಬವರು ಯುವಕರ ಕಾರ್ಯದಿಂದ ಪ್ರೇರಿತಗೊಂಡು ತಾವು ಕೂಡ ಹಾರೆ ಹಿಡಿದು ಯುವಕರೊಂದಿಗೆ ಶ್ರಮದಾನದಲ್ಲಿ ತೊಡಗಿಸಿಕೊಂಡು ಯುವಕರಲ್ಲಿ ಉತ್ಸಾಹ ತುಂಬಿದ್ದು ಸಾರ್ವಜನಿಕರ ಪ್ರಶಂಶೆಗೆ ಕಾರಣವಾಗಿದೆ.
