ಬಂಟ್ವಾಳ:ತಾಲ್ಲೂಕಿಗೆ ಸಮೀಪದ ಅರ್ಕುಳ ಗಾಣಿಗರ ಸೇವಾ ಸಂಘದ ವತಿಯಿಂದ ತುಪ್ಪೆಕಲ್ಲು ಗಾಣಿಗರ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ‘ಆಟಿಡೊಂಜಿ ದಿನ ಆಟಿದ ಗೊಬ್ಬುಲು’ ಕಾರ್ಯಕ್ರಮದಲ್ಲಿ ತುಳುನಾಡಿನ ವಿಭಿನ್ನ ರೀತಿಯ ಸ್ಪರ್ಧೆ ಜೊತೆಗೆ ವೈವಿಧ್ಯಮಯ ತಿಂಡಿ-ತಿನಿಸು ಗಮನ ಸೆಳೆಯಿತು. ಸುಮಾರು 500ಕ್ಕೂ ಮಿಕ್ಕಿ ಮಂದಿ ಪಾಲ್ಗೊಂಡಿದ್ದ ಈ ಕಾರ್ಯಕ್ರಮದಲ್ಲಿ ಬಾಲ್ಯದ ನೆನಪುಗಳನ್ನು ಮರುಕಳಿಸುವಂತೆ ತುಳುನಾಡಿನ ವಿವಿಧ ಬಗೆಯ ಗ್ರಾಮೀಣ ಸ್ಪರ್ಧೆಗಳು ಒಂದೆಡೆಯಾದರೆ, ಇನ್ನೊಂದೆಡೆ ಪ್ರತೀ ಮನೆಯಿಂದ ಮಹಿಳೆಯರು ಸಿದ್ಧಪಡಿಸಿಕೊಂಡು ಬಂದಿದ್ದ ಘಮ ಘಮಿಸುವ 25ಕ್ಕೂ ಮಿಕ್ಕಿ ಬಗೆಯ ತಿಂಡಿ ತಿನಿಸುಗಳನ್ನು ಸವಿದು ಮಕ್ಕಳು, ಮಹಿಳೆಯರು ಮತ್ತು ವಯೋವೃದ್ಧರೆನ್ನದೆ ಸಂಭ್ರಮ ಪಟ್ಟರು.
ಆರಂಭದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಸಂಘದ ಗೌರವಾಧ್ಯಕ್ಷ ಮಾಧವ ಟೈಲರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ಸಂಘದ ಅಧ್ಯಕ್ಷ ಜಯರಾಜ್ ಕರ್ಕೇರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸಂಘದ ಗೌರವಾಧ್ಯಕ್ಷ, ಉದ್ಯಮಿ ಜನಾರ್ಧನ ಅರ್ಕುಳ ಮಾತನಾಡಿ, ಯುವಜನತೆಗೆ ಆಟಿ ತಿಂಗಳ ಮಹತ್ವ ಸಾರುವ ಜೊತೆಗೆ ತುಳುನಾಡಿನ ಔಷಧೀಯ ಗುಣವುಳ್ಳ ಆಹಾರ ಪದ್ಧತಿ ಮತ್ತು ಆರೋಗ್ಯದಾಯಕ ಗ್ರಾಮೀಣ ಕ್ರೀಡೆಗಳ ಪರಿಚಯ ನೀಡಲು ಇಂತಹ ಕಾರ್ಯಕ್ರಮಗಳ ಅಗತ್ಯವಿದೆ ಎಂದರು.
ಸಂಘದ ಪ್ರಮುಖರಾದ ಅಶೋಕ ಸಪಲ್ಯ, ಮೋನಪ್ಪ ಸಪಲ್ಯ, ರಮೇಶ ಸಪಲ್ಯ, ವಿಶ್ವನಾಥ ಸಪಲ್ಯ ಜಯಂತಿ, ಶಕುಂತಳಾ ಎಂ. ಮತ್ತಿತರರು ಇದ್ದರು. ದಿನಕರ ಕರ್ಕೇರ ಮತ್ತು ಪ್ರವೀಣ ಅರ್ಕುಳ ಕಾರ್ಯಕ್ರಮ ನಿರೂಪಿಸಿದರು.


