ಉಡುಪಿ: ಪಡುಬಿದ್ರೆ- ಹೆಜಮಾಡಿ ಟೊಲ್ ನಾಕ್ ಬಳಿ, ಅಸ್ವಸ್ಥಗೊಂಡು ಬಿದ್ದಿರುವ ಅಪರಿಚಿತ ವಿಶೇಷಚೇತನ ಯುವಕನನ್ನು ನವಯುಗ್ ಸಂಸ್ಥೆಯ ಸಿಬ್ಭಂದಿಗಳ ಸಹಕಾರದಿಂದ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರು ರಕ್ಷಿಸಿ ಉಡುಪಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲುಪಡಿಸಿದ ಘಟನೆ ಮಂಗಳವಾರ ನಡೆದಿದೆ.
ತನ್ನ ಹೆಸರು ಕುಮಾರ(32 ವ) ತಂದೆ ನಾಗಣ್ಣ, ಮೈಸೂರು ಜಿಲ್ಲೆಯ ನಂಜನಗೂಡು- ರಾಷ್ಟ್ರಪತಿ ರಸ್ತೆಯ ಬಳಿ ಇರುವ ಬಾಡಿಗೆ ಮನೆಯಲ್ಲಿ ಈ ಮೊದಲು ವಾಸ್ಥವ್ಯ ಇದ್ದೆ. ತಂದೆ ತಾಯಿ ಮೃತಪಟ್ಟ ಬಳಿಕ ನಿರ್ಗತಿಕನಾಗಿದ್ದೆನೆ ಎಂದು ಯುವಕನು ಹೇಳಿಕೊಂಡಿದ್ದಾನೆ. ಯುವಕನಿಗೆ ತುರ್ತು ಪುರ್ನವಸತಿಯ ವ್ಯವಸ್ಥೆಗೊಳಿಸ ಬೇಕಾಗಿದ್ದು, ಯುವಕನ ಸಂಬಂಧಿಗಳು ಜಿಲ್ಲಾಸ್ಪತ್ರೆಯ ನಾಗರಿಕ ಸಹಾಯ ಕೇಂದ್ರವನ್ನು ಸಂಪರ್ಕಿಸ ಬೇಕೆಂದು ನಾಗರಿಕ ಸಮಿತಿ ವಿನಂತಿಸಿದೆ. ಅಸಹಾಯಕ ಸ್ಥಿತಿಯಲ್ಲಿ ಇರುವ ವಿಶೇಷಚೇತನ ಯುವಕನ ನೆರವಿಗೆ ಜಿಲ್ಲಾಡಳಿತ, ವಿಕಲಚೇತನರ ಸಬಲೀಕರಣ ಇಲಾಖೆ ನೆರವಿಗೆ ಬರಬೇಕೆಂದು ಸಮಿತಿಯ ಕಾರ್ಯಕರ್ತರು ಆಗ್ರಹಿಸಿದ್ದಾರೆ.
