ಕೈಕಂಬ : ಗುರುಪುರ ಗ್ರಾಮ ಪಂಚಾಯತ್, ಜಿಲ್ಲಾ ಪಂಚಾಯತ್ ಸ್ವಚ್ಚ ಭಾರತ ಮಿಷನ್ ಹಾಗೂ ಇತರ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಜೂ. 29ರಂದು ಗುರುಪುರ ಗ್ರಾಪಂ ಸಭಾಭವನದಲ್ಲಿ `ಸ್ವಚ್ಚ ಮೇವ ಜಯತೇ’ ಆಂದೋಲನದಂಗವಾಗಿ ವಿಶೇಷ ಕಾರ್ಯಕ್ರಮ ಜರುಗಿತು.

ಜಿಪಂ ಸ್ವಚ್ಚ ಭಾರತ ಮಿಷನ್ ಜಿಲ್ಲಾ ನೆರವು ಘಟಕ ಸಮಾಲೋಚಕ ನವೀನ್ ಮಾತನಾಡುತ್ತ, ಭವಿಷ್ಯದಲ್ಲಿ ಮನುಕುಲಕ್ಕೆ ಕುಡಿಯುವ ನೀರು, ಸ್ವಚ್ಚತೆ ಸವಾಲಾಗಲಿದೆ. ಪ್ರಕೃತಿ ಮೇಲೆ ನಡೆಯುತ್ತಿರುವ ದಾಳಿಯಿಂದ ನಾವಿಂದು ನಾನಾ ರೀತಿಯ ಕಾಯಿಲೆಗಳಿಗೆ ತುತ್ತಾಗಿದ್ದೇವೆ. ತ್ಯಾಜ್ಯ ಸಮಸ್ಯೆ ಮನೆಯಿಂದಲೇ ಆರಂಭವಾಗುತ್ತದೆ. ತ್ಯಾಜ್ಯ ಸುಟ್ಟರೆ ಅದರ ಹೊಗೆಯಲ್ಲಿರುವ ಡಯಾಕ್ಸಿನ್ ರಾಸಾಯನಿಕ ಹಲವು ಕಾಯಿಲೆಗಳಿಗೆ ಕಾರಣವಾಗಿದೆ. ತ್ಯಾಜ್ಯ ವಿಲೇಗೆ ಪ್ರತಿ ಮನೆಯಲ್ಲೂ ಪೈಪ್ ಕಾಂಪೋಸ್ಟ್ ವಿಧಾನ ಹೆಚ್ಚು ಪರಿಣಾಮಕಾರಿ ಎಂದರು.
ಪ್ರಸ್ತಾವಿಕ ಮಾತನಾಡಿದ ಪಂಚಾಯತ್ ಪಿಡಿಒ ಅಬೂಬಕ್ಕರ್, ತ್ಯಾಜ್ಯ ವಿಲೇಗೆ ಸರ್ಕಾರ ಯಾವುದೇ ಅನುದಾನ ನೀಡುವುದಿಲ್ಲ. ಗ್ರಾಮಸ್ಥರಿಗೆ ಮಾಹಿತಿ ಒದಗಿಸಿ, ಸ್ವಚ್ಚತಾ ಕಾರ್ಯಕ್ಕೆ ಉತ್ತೇಜನ ನೀಡುವುದು ನಮ್ಮ ಕರ್ತವ್ಯವಾಗಿದೆ. ವಾಹನಗಳಲ್ಲಿ ತ್ಯಾಜ್ಯ ಸಂಗ್ರಹಿಸುವ ಗುತ್ತಿಗೆದಾರಿಗೆ ತ್ಯಾಜ್ಯ ವಿಲೇ ಹಾಗೂ ಮನೆಯವರಿಂದ ಹಣ ವಸೂಲಿ ಸಮಸ್ಯೆ ಎದುರಿಸುತ್ತಾರೆ. ಪರಿಣಾಮ, ಅರ್ಧದಲ್ಲೇ ಗುತ್ತಿಗೆ ಕೈಬಿಡುತ್ತಾರೆ. ಆದರೂ ಗುರುಪುರ ಪಂಚಾಯತ್ ತ್ಯಾಜ್ಯ ನಿರ್ವಹಣೆಗೆ ಸಾಧ್ಯವಿರುವ ಎಲ್ಲ ಪ್ರಯತ್ನ ಮಾಡುತ್ತಿದ್ದು, ಸಾರ್ವಜನಿಕರ ಸಹಕಾರ ಅತ್ಯವಶ್ಯ ಎಂದು ಹೇಳಿದರು.
ಮತ್ತೊಬ್ಬ ಸಂಪನ್ಮೂಲ ವ್ಯಕ್ತಿ ಅಬ್ದುಲ್ ರಹಿಮಾನ್ ಬಂಡಸಾಲೆ ಮಾತನಾಡುತ್ತ, ಸ್ವಚ್ಚತೆ ಎಂಬುದು ನನ್ನ ಪ್ರಜ್ಞೆ. ಸ್ವಚ್ಚತೆಗಾಗಿ ಗ್ರಾಪಂನಿಂದ ಸಹಕಾರ ಪಡೆಯಬಹುದು. ಈ ನಿಟ್ಟಿನಲ್ಲಿ ಪಂಚಾಯತ್ ತಾತ್ಕಾಲಿಕ ವ್ಯವಸ್ಥೆ ಮಾಡಬಹುದು. ಪ್ರತಿಯೊಂದು ಮನೆಯಲ್ಲಿ ಪೈಪ್ ಕಾಂಪೋಸ್ಟ್ ವ್ಯವಸ್ಥೆ ಅನುಷ್ಠಾನಗೊಳಿಸಿದರೆ ತ್ಯಾಜ್ಯ ಸಮಸ್ಯೆ ಬಗೆಹರಿಯಲಿದೆ. ಇದನ್ನು ಮರಗಿಡಗಳಿಗೆ ಗೊಬ್ಬರವಾಗಿ ಬಳಸಬಹುದು. ಭವಿಷ್ಯದ ಸ್ವಚ್ಚ ಪರಿಸರಕ್ಕಾಗಿ ಶಾಲಾ ಮಕ್ಕಳಲ್ಲಿ ಪ್ಲಾಸ್ಟಿಕ್ ಹಾಗೂ ಇತರ ತ್ಯಾಜ್ಯ ಸೊತ್ತುಗಳ ದುಷ್ಪರಿಣಾಮದ ಬಗ್ಗೆ ಅರಿವು ಮೂಡಿಸುವ ಪೋಷಕರು ಮತ್ತು ವಿದ್ಯಾ ಸಂಸ್ಥೆಗಳ ಹೊಣೆಗಾರಿಕೆಯಾಗಿದೆ ಎಂದರು.
ಜಿಪಂ ಸದಸ್ಯ ಯು ಪಿ ಇಬ್ರಾಹಿಂ ಮಾತನಾಡುತ್ತ, ಕುಂದಾಪುರದ ವಂಡ್ಸೆ ಮತ್ತು ನಿಟ್ಟೆ ಗ್ರಾಪಂ ಮಾದರಿಯಂತೆ ಇಲ್ಲಿ ತ್ಯಾಜ್ಯ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು. ಅಲ್ಲಿನ ಪಂಚಾಯತ್ ಆಡಳಿತ ತ್ಯಾಜ್ಯದಿಂದ ತಿಂಗಳಿಗೆ 70,000 ರೂ ಆದಾಯ ಗಳಿಸುತ್ತಿದೆ. ಇಲ್ಲೂ ಈ ವ್ಯವಸ್ಥೆ ಅನುಷ್ಠಾನಕ್ಕೆ ಗ್ರಾಮಸ್ಥರು, ಸಂಘ-ಸಂಸ್ಥೆಗಳು ಪಂಚಾಯತ್ ಆಡಳಿತದೊಂದಿಗೆ ಕೈಜೋಡಿಸುವ ಅಗತ್ಯವಿದೆ ಎಂದರು.
ಗುರುಪುರ ಕೈಕಂಬದ ದಿಶಾ ಟ್ರಸ್ಟ್ ಇದರ ನಿರ್ದೇಶಕ ಸಿಲ್ವೆಸ್ಟರ್ ಡಿ’ಸೋಜ ತ್ಯಾಜ್ಯ ವಿಲೇ ಬಗ್ಗೆ ಉಪಯುಕ್ತ ಮಾಹಿತಿ ನೀಡಿದರು. ವೇದಿಕೆಯಲ್ಲಿ ಗ್ರಾಪಂ ಅಧ್ಯಕ್ಷೆ ರುಕಿಯಾ ಇದ್ದರು. ಸಭೆಯಲ್ಲಿ ಗ್ರಾಮ ಸದಸ್ಯರು ಹಾಗೂ ಸಾಕಷ್ಟು ಸಂಖ್ಯೆಯಲ್ಲಿ ಗ್ರಾಮಸ್ಥರು ಭಾಗವಹಿಸಿದ್ದರು.
