ಎಡಪದವು : ಎಡಪದವಿನ ಐಡಿಯಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗಂಜಿಮಠದ ಆಯುರ್‍ಸ್ಪರ್ಶ ಆಯುರ್ವೇದ ಆಸ್ಪತ್ರೆ ಮತ್ತು ಆಯುರ್‍ಸ್ಪರ್ಶ ಡಯಾಬಿಟಿಕ್ ಇನ್ನೋವೇಟಿವ್ ಫೌಂಡೇಶನ್(ರಿ) ಇವುಗಳ ಜಂಟಿ ಆಶ್ರಯದಲ್ಲಿ `ಮಧುಮೇಹ ತಡೆಗೆ ನಮ್ಮಯ ನಡಿಗೆ ವಿದ್ಯಾರ್ಥಿಗಳ ಕಡೆಗೆ’ ಎಂಬ ಮಧುಮೇಹ ಜಾಗೃತಿ ಅಭಿಯಾನ ನಡೆಯಿತು.
ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಫೌಂಡೇಶನಿನ ಅಧ್ಯಕ್ಷ ಡಾ. ಸತೀಶ್ ಶಂಕರ್, ಮಧುಮೇಹ ತಡೆಗಟ್ಟಲು ನಿಯಮಿತ ಆಹಾರದ ಜೊತೆಗೆ ವ್ಯಾಯಾಮ ಅತಿ ಅಗತ್ಯ. ಒತ್ತಡರಹಿತ ಜೀವನಶೈಲಿ ರೂಢಿಸಿಕೊಳ್ಳಬೇಕು ಎಂದರು.
ಆಯುರ್ವೇದದಲ್ಲಿ ರೋಗ ಬರದಂತೆ ತಡೆಗಟ್ಟಲು ದಿನಚರ್ಯ ಮತ್ತು ಋತುಚರ್ಯ ವಿಧಾನಗಳಿವೆ. ಇದರಿಂದ ಮಧುಮೇಹದ ಜೊತೆಗೆ ಅನೇಕ ಕಾಯಿಲೆ ತಡೆಗಟ್ಟಬಹುದು. ದಿನನಿತ್ಯ ಕನಿಷ್ಠ 30 ನಿಮಿಷ ವ್ಯಾಯಾಮ ಮಾಡಬೇಕು ಎಂದು ವೈದ್ಯರು ತಿಳಿಸಿದರು.
ಈ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳಲ್ಲಿ ಮಧುಮೇಹದ ಬಗ್ಗೆ ಜಾಗೃತಿ ಮೂಡಿಸುವ ಚಿತ್ರಕಲೆ ಮತ್ತು ಪ್ರಬಂಧ ಸ್ಪರ್ಧೆ ಆಯೋಜಿಸಲಾಯಿತು. ಐಡಿಯಲ್ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ಮೊಹಮ್ಮದ್ ಬ್ಯಾರಿ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಉಮಾಪ್ರಿಯಾ ಗಡಿಯಾರ್ ಸ್ವಾಗತಿಸಿ, ವಂದಿಸಿದರು.


