ಮೂಡುಬಿದಿರೆ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯೊಂದಿಗೆ ಆರ್ಥಿಕ ವ್ಯವಹಾರ ಮಾಡುವವರಿಗೆ ಎಲ್‍ಐಸಿಯ ಜೀವನ್ ಭದ್ರತಾ ಪಾಲಿಸಿ ನೀಡಲಾಗುತ್ತಿದ್ದು, ಸಾಲದ ಮೊತ್ತದ 2 ಶೇ.ದಂತೆ ಇದುವರೆಗೆ ರೂ. 65 ಕೋಟಿಯಷ್ಟು ದೊಡ್ಡ ಮೊತ್ತ ಎಲ್‍ಐಸಿಯಲ್ಲಿ ಜಮಾ ಆಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರಹೆಗ್ಗಡೆ ಹೇಳಿದರು.

mbd_june5_4
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್‍ನ ಕಾರ್ಕಳ ತಾಲೂಕಿನ ವಿಭಜಿತ ಮೂಡುಬಿದಿರೆ ತಾಲೂಕು ಕಚೇರಿಯನ್ನು ಅಲಂಗಾರ್‍ನ ಡಿ.ಜೆ. ಸೆಂಟರ್‍ನಲ್ಲಿ ಉದ್ಘಾಟಿಸಿ, ಅಲಂಗಾರು ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಾತನಾಡಿದ ಅವರು,
ಗ್ರಾಮಾಭಿವೃದ್ಧಿ ಯೋಜನೆಯು ಬೆಳ್ತಂಗಡಿ ತಾಲೂಕಿನಿಂದ ವಿಸ್ತರಣೆಗೊಂಡು ಕಾರ್ಕಳ ತಾಲೂಕನ್ನು ಪ್ರವೇಶಿಸಿದ ಬಳಿಕ ಈ ಕಳೆದ 24 ವರ್ಷಗಳಲ್ಲಿ ಅತ್ಯಂತ ಯಶಸ್ವಿ ನಿರ್ವಹಣೆಯನ್ನು ತೋರಿದೆ, ಇದರಲ್ಲಿ ಅವಿಭಜಿತ ಕಾರ್ಕಳ ತಾಲೂಕಿನೊಳಗಿದ್ದ ಮೂಡುಬಿದಿರೆಯ ಸಾಧನೆಯೂ ಗಣನೀಯ ಎಂದರು.
ಜ್ಞಾನ ವಿಕಾಸ ಕೇಂದ್ರದ ಅಧ್ಯಕ್ಷೆ ಹೇಮಾವತಿ ವೀ.ಹೆಗ್ಗಡೆ ಅವರು ನೂತನ ಕಚೇರಿಯಲ್ಲಿ ಜ್ಯೋತಿ ಬೆಳಗಿಸಿದರು.
ಎಸ್‍ಕೆಡಿಆರ್‍ಡಿಪಿ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್. ಎಚ್. ಮಂಜುನಾಥ ಪ್ರಾಸ್ತಾವಿಕವಾಗಿ ಮಾತನಾಡಿ, ಮೂಡುಬಿದಿರೆ ತಾಲೂಕು ಕಚೇರಿಯ ವ್ಯಾಪ್ತಿಯಲ್ಲಿರುವ ಹೊಸ್ಮಾರು, ಶಿರ್ತಾಡಿ, ಬೆಳುವಾಯಿ, ಬೆಳ್ಮಣ್ಣು, ಮೂಡುಬಿದಿರೆ, ಪುತ್ತಿಗೆ, ಅಲಂಗಾರು, ಈ ಏಳು ವಲಯಗಳಲ್ಲಿ 2,118 ಸ್ವಸಹಾಯ ಸಂಘಗಳಿದ್ದು 7 ಮಂದಿ ಮೇಲ್ವಿಚಾರಕರು, ಜ್ಞಾನವಿಕಾಸ ಕೇಂದ್ರದ ಸಮನ್ವಯಾಧಿಕಾರಿ, ಆಂತರಿಕ ಲೆಕ್ಕಪರಿಶೋಧಕ, ಕೃಷಿ ಮೇಲ್ವಿಚಾರಕರು ತಲಾ ಒಬ್ಬರಂತೆ, ನಗದು ಸಹಾಯಕರು 9, ಓರ್ವ ಜ್ಞಾನ ವಿಕಾಸ ಕೇಂದ್ರದ ಉಸ್ತುವಾರಿ ಹಾಗೂ 74 ಮಂದಿ ಸೇವಾಪ್ರತಿನಿಧಿಗಳು ಹಾಗೂ ತಾ. ಕಚೇರಿ ಸಿಬಂದಿಗಳಿದ್ದಾರೆ ಎಂದರು.
ಬೆಳಗಾವಿಗೆ ಪದೋನ್ನತಿಯೊಂದಿಗೆ ವರ್ಗಾವಣೆಗೊಂಡಿರುವ ಕಾರ್ಕಳ ತಾ. ಯೋಜನಾಧಿಕಾರಿ ಕೃಷ್ಣ ಅವರನ್ನು ಪುರಸ್ಕರಿಸಲಾಯಿತು.
ಮೂಡುಬಿದಿರೆ ತಾಲೂಕು ಯೋಜನಾಧಿಕಾರಿ ನಾರಾಯಣ ಶೆಟ್ಟಿ ವಂದಿಸಿದರು. ತಾ. ಲೆಕ್ಕ ಪರಿಶೋಧಕಿ ಅಮಿತಾ, ತಾಲೂಕಿನ ವಿವಿಧ ವಲಯಗಳ ಮೇಲ್ವಿಚಾರಕರು ಉಪಸ್ಥಿತರಿದ್ದರು. ಮೂಡುಬಿದಿರೆ ವಲಯ ಮೇಲ್ವಿಚಾರಕಿ ಭಾರತಿ ನಿರೂಪಿಸಿದರು.
ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ರಾಜ್ಯ ಕೃಷಿ ಬೆಲೆ ಆಯೋಗದ ಸದಸ್ಯ ಶಿರ್ತಾಡಿ ಸಂಪತ್ ಸಾಮ್ರಾಜ್ಯ, ಅಲಂಗಾರು ದೇವಳದ ಪ್ರಧಾನ ಅರ್ಚಕ ಈಶ್ವರ ಭಟ್, ಕೇಂದ್ರೀಯ ಒಕ್ಕೂಟದ ಅಧ್ಯಕ್ಷ ಜಯಕುಮಾರ ಜೈನ್, ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಸುಭಾಶ್ಚಂದ್ರ ಚೌಟ, ಡಿ.ಜೆ. ಸೆಂಟರ್‍ನ ಸೂರಜ್ ಜೈನ್, ಎಸ್‍ಕೆಡಿಆರ್‍ಡಿಪಿ ಪ್ರಾದೇಶಿಕ ನಿರ್ದೇಶಕ ಮಹಾವೀರ ಅಜ್ರಿ, ಜಿಲ್ಲಾ ನಿರ್ದೇಶಕ ಗಣೇಶ್ ಪಾಲ್ಗೊಂಡಿದ್ದರು.

By suddi9

Leave a Reply

Your email address will not be published. Required fields are marked *