ಮೂಡುಬಿದಿರೆ: ಎನ್.ಸಿ.ಸಿ. ನಮ್ಮ ಜೀವನದಲ್ಲಿ ಶಿಸ್ತು ಮತ್ತು ನಾಯಕತ್ವದ ಗುಣಗಳನ್ನು ಬೆಳೆಸುವಲ್ಲಿ ಮಹತ್ತರ ಪಾತ್ರ ವಹಿಸುತ್ತಿದೆ’ ಎಂದು ಮಾಜಿ ಸಚಿವ, ಶ್ರೀ ಮಹಾವೀರ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಕೆ. ಅಭಯಚಂದ್ರ ಹೇಳಿದರು.
ಶ್ರೀ ಮಹಾವೀರ ಕಾಲೇಜಿನಲ್ಲಿ ನಡೆದ 18ನೇ ಕರ್ನಾಟಕ ಬೆಟಾಲಿಯನ್ ಎನ್‍ಸಿಸಿ ಮಂಗಳೂರು ಇದರ ಎನ್.ಸಿ.ಸಿ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು .

18ನೇ ಕರ್ನಾಟಕ ಬೆಟಾಲಿಯನ್ ಎನ್‍ಸಿಸಿ ಕಮಾಂಡಿಂಗ್ ಆಫೀಸರ್ ಕರ್ನಲ್ ಮನೋಜ್ ವಿ.ಯು. ಸಮಾರೋಪ ಭಾಷಣವನ್ನು ಮಾಡಿದರು. ಮಹಾವೀರ ಪದವಿ ಕಾಲೇಜಿನ ಪ್ರಾಂಶುಪಾಲ ಪೆÇ್ರ. ಚಂದ್ರಶೇಖರ ದೀಕ್ಷಿತ್ ಮತ್ತು 18ನೇ ಕರ್ನಾಟಕ ಬೆಟಾಲಿಯನ್ ಎನ್‍ಸಿಸಿ ಆಡಳಿತಾಧಿಕಾರಿ ಲೆಫ್ಟಿನೆಂಟ್ ಕರ್ನಲ್ ಗ್ರೇಷಿಯನ್ ಸಿಕ್ವೇರಾ ಉಪಸ್ಥಿತರಿದ್ದರು.
ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನ ಪ್ರೌಢಶಾಲೆಯಲ್ಲಿ ವಿಜ್ಞಾನ ವಿಭಾಗದ ಅಧ್ಯಾಪಕರಾಗಿದ್ದು ಎನ್.ಸಿ.ಸಿ ಅಧಿಕಾರಿಯಾಗಿಯೂ ಸೇವೆ ಸಲ್ಲಿಸುತ್ತಿದ್ದು, ಇದೀಗ ಎನ್‍ಸಿಸಿ ಸೇವೆಯಿಂದ ನಿವೃತ್ತಿಹೊಂದಲಿರುವ ಚೀಫ್ ಆಫೀಸರ್ ಜಾರ್ಜ್ ಫೆರ್ನಾಂಡಿಸ್ ಅವರನ್ನು 18ನೇ ಕರ್ನಾಟಕ ಬೆಟಾಲಿಯನ್ ಎನ್‍ಸಿಸಿ, ಮಂಗಳೂರು ವತಿಯಿಂದ ಸನ್ಮಾನಿಸಲಾಯಿತು.
ಮಹಾವೀರ ಕಾಲೇಜಿನ ಎನ್‍ಸಿಸಿ ಅಧಿಕಾರಿ ಮೇಜರ್ ಡಾ.ರಾಧಾಕೃಷ್ಣ ಶೆಟ್ಟಿ ಪ್ರಸ್ತಾವನೆಗೈದು ಸನ್ಮಾನ ಪತ್ರ ವಾಚಿಸಿದರು. ಮುಲ್ಕಿ ನಾರಾಯಣಗುರು ಪ್ರೌಢಶಾಲೆಯ ಎನ್‍ಸಿಸಿ ಅಧಿಕಾರಿ ಚೀಫ್ ಆಫೀಸರ್ ಗಂಗಾಧರ ಪೂಜಾರಿ ಸ್ವಾಗತಿಸಿದರು.
ಮೂಡುಬಿದಿರೆ ಧವಲಾ ಕಾಲೇಜಿನ ಎನ್‍ಸಿಸಿ ಅಧಿಕಾರಿ ಲೆಫ್ಟಿನೆಂಟ್ ಅಶೋಕ್ ವಂದಿಸಿದರು. ಸುರತ್ಕಲ್ ಗೋವಿಂದದಾಸ್ ಕಾಲೇಜಿನ ಎನ್‍ಸಿಸಿ ಅಧಿಕಾರಿ ಕ್ಯಾಪ್ಟನ್ ಸುಧಾ ಶೆಟ್ಟಿ ನಿರೂಪಿಸಿದರು. ಹತ್ತು ದಿನಗಳ ಶಿಬಿರದಲ್ಲಿ ದ.ಕ. ಜಿಲ್ಲೆಯ ವಿವಿಧ ಶಿಕ್ಷಣಾಲಯಗಳ ಸುಮಾರು 600 ಮಂದಿ ಎನ್‍ಸಿಸಿ ಆರ್ಮಿ ಕೆಡೆಟ್‍ಗಳು ಭಾಗವಹಿಸಿದ್ದರು.
