ಅಹಮದಾಬಾದ್ (ಐಎಎನ್‌ಎಸ್): ಮೂರು ದಿನಗಳ ಭೇಟಿಗಾಗಿ ಭಾರತಕ್ಕೆ ಆಗಮಿಸಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಗುಜರಾತ್‌ನ ವಾಣಿಜ್ಯ ರಾಜಧಾನಿ ಅಹಮದಾಬಾದ್ಗೆ ಬುಧವಾರ ಕೊಲಂಬೋದಿಂದ ವಿಮಾನದಲ್ಲಿ ಆಗಮಿಸಿದರು. ಗುಜರಾತ್ ಮೂಲಕ ಭಾರತಕ್ಕೆ ಭೇಟಿ ಕೊಡುತ್ತಿರುವ ಮೊದಲ ವಿಶ್ವ ನಾಯಕರೆನಿಸಿದರು.
ಅಹಮದಾಬಾದ್‌ನ ಸರ್ದಾರ್ ವಲ್ಲಭಾಯಿ ಪಟೇಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪತ್ನಿ ಮತ್ತು ಉನ್ನತ ಅಧಿಕಾರಿಗಳ ನಿಯೋಗದೊಂದಿಗೆ ಬಂದಿಳಿದ ಕ್ಸಿ ಜಿನ್‌ಪಿಂಗ್ ಅವರನ್ನು ಗೌರವರಕ್ಷೆಯೊಂದಿಗೆ ಬರಮಾಡಿಕೊಳ್ಳಲಾಯಿತು. ಪ್ರಧಾನಿ ಮೋದಿ ಅವರು ಹೋಟೆಲ್‌ನಲ್ಲಿ ಕ್ಸಿ ಜಿನ್‌ಪಿಂಗ್ ಅವರನ್ನು ಸ್ವಾಗತಿಸಲಿದ್ದಾರೆ. ನಂತರ ಮೋದಿ ಮತ್ತು ಕ್ಸಿ ಜಿನ್‌ಪಿಂಗ್ ಅವರು ಮೊದಲ ಸುತ್ತಿನ ಮಾತುಕತೆ ನಡೆಸಲಿದ್ದಾರೆ.
ಗುರುವಾರ ದೆಹಲಿಯ ಹೈದರಾಬಾದ್ ಹೌಸ್ನಲ್ಲಿ ಉಭಯ ನಾಯಕರ ನಡುವೆ ದ್ವಿಪಕ್ಷೀಯ ಮಾತುಕತೆ ನಡೆಯಲಿದ್ದು, ಮೂಲಸೌಕರ್ಯ ಹಾಗೂ ರೈಲ್ವೆಗೆ ಸಂಬಂಧಿಸಿ ಹಲವು ಒಪ್ಪಂದಗಳಿಗೆ ಸಹಿ ಬೀಳಲಿದೆ. ಕ್ಸಿ ಜಿನ್‌ಪಿಂಗ್ ಭಾರತಕ್ಕೆ ಭೇಟಿ ನೀಡುತ್ತಿರುವ ಚೀನಾ ಅಧ್ಯಕ್ಷರಲ್ಲಿ ಮೂರನೆಯವರು. ಈ ಮೊದಲು ಹು ಜಿಂಟಾವೊ 2006ರಲ್ಲಿ ಹಾಗೂ ಜಿಯಾಂಗ್ ಜೆಮಿನ್ 1996ರಲ್ಲಿ ಭೇಟಿ ನೀಡಿದ್ದರು.

