ಸಾಮಾನ್ಯಕ್ಕಿಂತಲೂ 2 ಡಿಗ್ರಿ ಸೆಲ್ಸಿಯಸ್ ಅಧಿಕ ತಾಪಮಾನ: ಜಾಗೃತಿ ವಹಿಸಲು ವೈದ್ಯರ ಸೂಚನೆ
ಬೆಂಗಳೂರು: ಎ.8 ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕಳೆದ ಮೂರು ದಿನಗಳಿಂದ ಸಾಮಾನ್ಯಕ್ಕಿಂತಲೂ ಸರಾಸರಿ ಎರಡು ಡಿಗ್ರಿ ಸೆಲ್ಸಿಯಸ್ ಅಷ್ಟು ಅಧಿಕ ತಾಪಮಾನ ದಾಖಲಾಗಿದೆ. ಮಂಗಳೂರು, ಬೆಂಗಳೂರು, ರಾಯಚೂರು, ಗದಗ, ದಾವಣಗೆರೆ, ಬಳ್ಳಾರಿ, ಚಿತ್ರದುರ್ಗ ಸೇರಿದಂತೆ ರಾಜ್ಯದಾದ್ಯಂತ ಸಾಮಾನ್ಯಕ್ಕಿಂತಲೂ ಅಧಿಕ ತಾಪಮಾನ ದಾಖಲಾಗುತ್ತಿದ್ದು, ಮುಂದೆಯೂ ಇದೇ ಪ್ರಮಾಣದಲ್ಲಿ ಅಧಿಕ ಬಿಸಿಲಿನ ಪ್ರಮಾಣ ಇರುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಶನಿವಾರ ಸಂಜೆಯೇ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಿದ್ದು, ಕಾದ ಭೂಮಿಗೆ ತಂಪೆರೆಯಿತು. ಬೇಸಿಗೆ ಧಗೆಗೆ ಕಂಗಾಲಾಗಿದ್ದ ಜನರು ಮಳೆಗೆ ಮೈಯೊಡ್ಡಿ ಖುಷಿಪಟ್ಟರು. ಹುಬ್ಬಳ್ಳಿ, ಧಾರವಾಡ ಸೇರಿ ಉತ್ತರ ಒಳನಾಡಿನ ಕೆಲವು ಭಾಗಗಳಲ್ಲಿ ತುಂತುರು ಹನಿದಿದೆ. ಬೆಂಗಳೂರಿನಲ್ಲಿ ಸಾಮಾನ್ಯಕ್ಕಿಂತಲೂ 2 ಡಿಗ್ರಿ ಸೆಲ್ಸಿಯಸ್ ಹೆಚ್ಚಿನ ಉಷ್ಣಾಂಶ ದಾಖಲಾಗಿದ್ದು, ನಾಳೆಯೂ ಮುಂದುವರಿಯುವ ಸಾಧ್ಯತೆಯಿದೆ ಎನ್ನಲಾಗಿದೆ.
ದಿನದಿಂದ ದಿನಕ್ಕೆ ತಾಪಮಾನ ಅಧಿಕವಾಗುತ್ತಿದೆ. ಬಿಸಿಲು ಜನರನ್ನು ಸುಡುತ್ತಿದೆ. ಮತ್ತೊಂದು ಕಡೆ ತಾಪಮಾನ ಅಧಿಕವಾಗಿ ಸಾಂಕ್ರಾಮಿಕ ರೋಗಗಳು ಹರಡುತ್ತಿದ್ದು, ಈ ಹೊಸ ವರ್ಷದಲ್ಲಿ 11 ಮಂದಿ ಮೃತಪಟ್ಟಿರುವ ಘಟನೆ ನಡೆದಿದೆ. ಬಿಸಿಲಿನಿಂದ ಬೆವರಿಳಿಯುತ್ತಿರುವ ಹಿನ್ನೆಲೆಯಲ್ಲಿ ಬಾಯಾರಿಕೆ ತಡೆಗಟ್ಟಲು ಹಾಗೂ ದೇಹದಲ್ಲಿ ನೀರಿನಾಂಶ ಉಳಿಸಲು ತಂಪು ಪಾನೀಯ ಹಾಗೂ ಅಶುದ್ಧ ನೀರು ಸೇವನೆ ಮಾಡುತ್ತಿರುವುದರಿಂದಲೇ ಹೆಚ್ಚು ಜನ ಜ್ವರ ಸೇರಿದಂತೆ ಮತ್ತಿತರೆ ರೋಗಗಳಿಗೆ ಬಲಿಯಾಗುತ್ತಿದ್ದಾರೆ. ಇದುವರೆಗೂ ಡೆಂಗೆ ಜ್ವರದಿಂದ ಸಾವಿರಾರು ಜನರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಳೆಗಾಲದ ಸಂದರ್ಭದಲ್ಲಿ ಹೆಚ್ಚು ಮಳೆಯಲ್ಲಿ ನೆನೆಯುವುದರಿಂದ ಮಕ್ಕಳು ಸೇರಿದಂತೆ ವಯಸ್ಕರಲ್ಲಿ ಜ್ವರ ಕಾಣಿಸಿಕೊಳ್ಳುತ್ತದೆ. ಆದರೆ, ಈ ಬಾರಿ ಬೇಸಿಗೆಯಿಂದಲೇ ಆರಂಭವಾಗಿದ್ದು, ನಗರದ ಕೆ.ಸಿ.ಜನರಲ್ ಆಸ್ಪತ್ರೆ, ವಿಕ್ಟೋರಿಯಾ ಸೇರಿದಂತೆ ಹಲವು ಆಸ್ಪತ್ರೆಗಳಿಗೆ ಜ್ವರದ ಕಾರಣ ನೀಡಿ ರೋಗಿಗಳು ಆಗಮಿಸುತ್ತಿದ್ದಾರೆ. ಇದುವರೆಗೂ ವಿಷಯಶೀತ ಜ್ವರಕ್ಕೆ 14331, ಹೆಪಟೈಟಿಸ್-ಎಗೆ 747, ಗ್ಯಾಸ್ಟ್ರೋಎಂಟರೈಟಿಸ್‌ಗೆ 30487, ಮಂಗನ ಕಾಯಿಲೆಗೆ 208 ಹಾಗೂ ಲೆಪ್ಟೊಸೈರೋಸಿಸ್‌ಗೆ 93 ತುತ್ತಾಗಿದ್ದಾರೆ ಎಂದು ಮೂಲಗಳು ಹೇಳಿವೆ.
ಏನೇನು ಮಾಡಬಾರದು:
►ತಂಪುಪಾನೀಯ ಸೇವನೆ ಮಾಡಬಾರದು.
►ಸ್ವಚ್ಛವಾಗಿ ಕೈ ತೊಳೆದು ಆಹಾರ ಸೇವಿಸಬೇಕು.
►ಶುದ್ಧವಾದ ನೀರನ್ನು ಕುಡಿಯಬೇಕು
►ರಸ್ತೆ ಬದಿ ಮಾರುವ ಆಹಾರ ಪದಾರ್ಥಗಳು, ಹಣ್ಣುಗಳು ತಿನ್ನಬಾರದು
►ಬಟ್ಟೆಗಳಲ್ಲಿ ಶುಚಿತ್ವ ಕಾಪಾಡಿಕೊಳ್ಳಬೇಕು
►ಬಿಸಿಲಿನಲ್ಲಿ ಮಕ್ಕಳನ್ನು ಆಟವಾಡದಂತೆ ನಿಯಂತ್ರಿಸಬೇಕು.
Attachments area