ಆನೇಕಲ್ : ಅಯೋಧ್ಯೆಯಲ್ಲಿ ಮುಸ್ಲಿಮರೇ ರಾಮಮಂದಿರ ಕಟ್ಟುತ್ತೇವೆ. ಆದರೆ ನೀವು ರಾಜಕೀಯಕ್ಕಾಗಿ ಧರ್ಮಗಳ ನಡುವೆ ಬೆಂಕಿ ಹಚ್ಚಬೇಡಿ, ರಾಜಕೀಯ ಬೆರೆಸಬೇಡಿ ಎಂದು ಆಹಾರ ಸಚಿವ ಜಮೀರ್ ಅಹ್ಮದ್ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಬಿ.ಕೆ. ಹರಿಪ್ರಸಾದ್ ಪರ ಪ್ರಚಾರದಲ್ಲಿ ಮಾತನಾಡಿದ ಜಮೀರ್ ಅಹ್ಮದ್, ದೇಶಭಕ್ತಿಗೆ ಧರ್ಮ ಬೇಕಿಲ್ಲ. ಮುಸ್ಲಿಂ-ಕ್ರಿಶ್ಚಿಯನ್ ಹಿಂದೂಗಳ ಸಾಮರಸ್ಯವೇ ನಿಜವಾದ ದೇಶಭಕ್ತಿ. ನಾವು ನಿಜವಾದ ಇಂಡಿಯಾದ ದೇಶ ಭಕ್ತರು. ಆದರೆ ಬಿಜೆಪಿ ರಾಜಕೀಯಕ್ಕಾಗಿ ದ್ವೇಷ ಭಕ್ತಿಯೆಡೆಗೆ ವಾಲಿದ್ದಾರೆ ಎಂದು ಹೇಳಿದರು.
ಪ್ರಪಂಚದ ಇತರೆ ದೇಶಗಳನ್ನು ಸುತ್ತಿ ಬಂದಿರುವೆ, ಆದರೆ ಭಾರತದಲ್ಲಿರುವ ಪರಧರ್ಮ ಸಹಿಷ್ಣುತೆ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ.ಅದು ಇಲ್ಲಿಯವರೆಗೆ ನಡೆದುಕೊಂಡು ಬಂದಿದೆ ಎಂದರೆ ಅದಕ್ಕೆ ಅಂಬೇಡ್ಕರ್ ರಚಿಸಿದ ಸಂವಿಧಾನ ಕಾರಣ. ಅದಕ್ಕೂ ಬೆಂಕಿಯಿಡುವ ಬಿಜೆಪಿಯ ಆಟ ನಡೆಯಲ್ಲ ಎಂದು ಗುಡುಗಿದರು.

