ಕೈಕಂಬ : ಭಾರತೀಯ ಕಮ್ಯುನಿಸ್ಟ್ ಪಕ್ಷದ(ಮಾಕ್ಸ್‍ವಾದ-ಸಿಪಿಐಎಂ) `ರಾಜಕೀಯ ಸಮಾವೇಶ’ ಎ. 7ರಂದು ಬೆಳಿಗ್ಗೆ ಗುರುಪುರ ಕೈಕಂಬದ ಶ್ರೀರಾಮ ಸಭಾಂಗಣದಲ್ಲಿ ಜರುಗಿತು.ಸಿಪಿಐಎಂ ಕಾರ್ಯಕಾರಿ ಮಂಡಳಿ ಸದಸ್ಯ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಕೇಂದ್ರದ ಮೋದಿ ನೇತೃತ್ವದ ಸರ್ಕಾರ ಅಥವಾ ಬಿಜೆಪಿ ಸಂಸದನಿಂದ(ನಳಿನ್) ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಹೇಳಿಕೊಳ್ಳುವ ಯಾವ ಅಭಿವೃದ್ಧಿ ಕೆಲಸ ನಡೆದಿದೆ ? ಕೇಂದ್ರದ ಕಳಪೆ ಆರ್ಥಿಕ ನೀತಿಯಿಂದ ಉದ್ದಿಮೆ ನಾಶವಾಗಿದೆ. ಉದ್ಯೋಗ ಸೃಷ್ಟಿಯಾಗಿಲ್ಲ. ಕಪ್ಪುಹಣ ಬಂದಿಲ್ಲ, ಬ್ಯಾಂಕ್ ಖಾತೆಗೆ 15 ಲಕ್ಷ ರೂ ಜಮೆ ಆಗಿಲ್ಲ. ಅದಾನಿ, ಅಂಬಾನಿಯಂತಹ ಶ್ರೀಮಂತರ ಉದ್ಧರಿಸಿದೆ ಮೋದಿ ಸರ್ಕಾರ. ಬಿಜೆಪಿ ಅಧಿಕಾರದಿಂದ ಇಳಿದರೆ ಮಾತ್ರ ಕಾರ್ಮಿಕ ವರ್ಗ ಹಾಗೂ ಬಡವರಿಗೆ ಅಚ್ಚೇ ದಿನ ಬರಬಹುದು ಎಂದರು.ಸಿಪಿಐಎಂ ಕಾರ್ಯಕಾರಿ ಮಂಡಳಿಯ ಮತ್ತೊಬ್ಬ ಸದಸ್ಯ ಯು. ಬಿ .ಲೋಕಯ್ಯ ಮಾತನಾಡುತ್ತ, `ನಾವು ಕಾಂಗ್ರೆಸ್ ದ್ವೇಷಿಗಳಾಗಿದ್ದರೂ, ಮಹಾದ್ವೇಷಿ ಬಿಜೆಪಿಗಿಂತ ಕಾಂಗ್ರೆಸ್ ಆಗಬಹುದು.
ಎರಡೂ ಪಕ್ಷವೂ ಕಾರ್ಮಿಕ ವಿರೋಧಿ ನೀತಿ ಹೊಂದಿದೆ ಮತ್ತು ಶ್ರೀಮಂತರ ಪರವಿದೆ. ದೇಶ ಮಾರಲು ಹೊರಟಿರುವ ಬಿಜೆಪಿ ಸೋಲಿಸಲು ಕಾಂಗ್ರೆಸ್ಸಿಗೆ ಮತ ಚಲಾಯಿಸಬಹುದು. ಮೋದಿ ಖಾಸಗೀಕರಣದಿಂದ ದೇಶಕ್ಕೆ ಅಪಾಯ ಕಾದಿದೆ. ಮೋದಿ ಸಂಘ-ಪರಿವಾರಗಳ ಪ್ರಧಾನಿಯಾಗಿದ್ದು, ಬಡವರ ಪರ ಪ್ರಧಾನಿಯಲ್ಲ. ಮಲ್ಯ, ನೀರವ್‍ನಂತಹ ವಂಚಕರು ದೇಶ ಬಿಟ್ಟು ಹೋಗಲು ಅವಕಾಶ ಮಾಡಿಕೊಟ್ಟವರು ಯಾರೆಂದು ಮೋದಿಗೆ ಗೊತ್ತಿಲ್ಲವೇ ?” ಎಂದು ಸವಾಲೆಸೆದರು. ಅಧ್ಯಕ್ಷತೆ ವಹಿಸಿದ್ದ ಸಿಪಿಐಎಂ ಗುರುಪುರ ವಲಯ ಮುಖಂಡ ಗಂಗಯ್ಯ ಅಮೀನ್ ಮಾತನಾಡುತ್ತ, ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ, ಮೋದಿಯ ಸುಳ್ಳು ಭರವಸೆ, ಜಾತಿ ತಾರತಮ್ಯದ ವಿಷಬೀಜ ಬಿತ್ತುತ್ತಿರುವ ಬಿಜೆಪಿಗರಿಗೆ ತಕ್ಕ ಪಾಠ ಕಲಿಸಬೇಕು ಎಂದರು. ಸಿಪಿಐಎಂ ಮುಖಂಡ ಸದಾಶಿವ ದಾಸ್ ಪ್ರಸ್ತಾವಿಕ ಮಾತನಾಡಿದರು. ನೋಣಯ್ಯ ಗೌಡ ವಂದಿಸಿದರು.



