ಸುದ್ದಿ9 ಅಹಮದಾಬಾದ್, ಸೆ. 17 : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬುಧವಾರ 64ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಉಂಟಾದ ಭೀಕರ ಪ್ರವಾಹದಿಂದಾಗಿ ಹುಟ್ಟು ಹಬ್ಬವನ್ನು ಆಚರಿಸುವುದು ಬೇಡ ಎಂದು ಮೋದಿ ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳಿಗೆ ಕರೆ ನೀಡಿದ್ದಾರೆ. ಬುಧವಾರ ಬೆಳಗ್ಗೆ ಪ್ರಧಾನಿ ಮೋದಿ ತಾಯಿ ಹೀರಾಬೆನ್ ಅವರನ್ನು ಭೇಟಿ ಮಾಡಿ ಅವರ ಆಶೀರ್ವಾದ ಪಡೆದರು. ಸಿಹಿ ತಿಂಡಿಯನ್ನು ಮೋದಿಗೆ ತಿನ್ನಿಸಿದ ತಾಯಿ, ಮಗನ ಹಣೆಗೆ ಮತ್ತಿಟ್ಟು ಆಶೀರ್ವಾದ ಮಾಡಿದರು. ನಂತರ ಜಮ್ಮು ಮತ್ತು ಕಾಶ್ಮೀರ ಸಂತ್ರಸ್ತರ ಸಹಾಯಕ್ಕಾಗಿ 5000 ರೂ.ಗಳನ್ನು ಪ್ರಧಾನಮಂತ್ರಿ ಪರಿಹಾರ ನಿಧಿಗೆ ನೀಡಿದರು. ಬುಧವಾರ ಪ್ರಧಾನಿ ನರೇಂದ್ರ ಮೋದಿ ಗುಜರಾತ್‌ನಲ್ಲೇ ಇರಲಿದ್ದು, ಮಧ್ಯಾಹ್ನ ಆಗಮಿಸುವ ಚೀನಾ ಅಧ್ಯಕ್ಷ ಜಿನ್‌ಪಿಂಗ್ ಅವರನ್ನು ಸ್ವಾಗತಿಸಲಿದ್ದಾರೆ. ಜಿನ್‌ಪಿಂಗ್ ಅವರು ಪತ್ನಿ ಪೆಂಗ್ ಲಿಯುವಾನ್ ಹಾಗೂ ಉನ್ನತ ಮಟ್ಟದ ನಿಯೋಗದೊಂದಿಗೆ ಕೊಲೊಂಬೊದಿಂದ ನೇರವಾಗಿ ಅಹಮದಾಬಾದ್‌ಗೆ ಆಗಮಿಸಲಿದ್ದಾರೆ. ಮೋದಿ ಹಾಗೂ ಚೀನಾ ಅಧ್ಯಕ್ಷರ ನಡುವೆ ಅಹಮದಾಬಾದ್‌ನಲ್ಲಿ ಉನ್ನತ ಮಟ್ಟದ ಸಭೆ ನಡೆಯಲಿದ್ದು, ಸಭೆಯಲ್ಲಿ ಚೀನಾದ 100ಕ್ಕೂ ಹೆಚ್ಚು ಪ್ರತಿನಿಧಿಗಳು ಹಾಗೂ ದೇಶದ 80 ಪ್ರತಿಷ್ಠಿತ ಉದ್ಯಮಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಹುಟ್ಟು ಹಬ್ಬ ಆಚರಿಸಬೇಡಿ : ನನ್ನ ಹುಟ್ಟು ಹಬ್ಬವನ್ನು ಆಚರಣೆ ಮಾಡಬೇಡಿ, ಕಾಶ್ಮೀರದಲ್ಲಿ ಸಂಕಷ್ಟಕ್ಕೆಸಿಲುಕಿರುವ ಜನರ ನೆರವಿಗೆ ನನ್ನ ಜನ್ಮದಿನಾಚರಣೆಗೆ ವ್ಯಯಿಸುವ ಸಮಯ ಮತ್ತು ಸಂಪನ್ಮೂಲವನ್ನು ವ್ಯಯಿಸಿ ಎಂದು ಮೋದಿ ಈಗಾಗಲೇ ಕರೆ ನೀಡಿದ್ದಾರೆ. [ನನ್ನ ಹುಟ್ಟು ಹಬ್ಬ ಆಚರಿಸಬೇಡಿ : ಮೋದಿ ಕರೆ]

