ಬಂಟ್ವಾಳ: ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಮಡಿವಾಳ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣದ ಎರಡನೇ ಆರೋಪಿ ಬಂಟ್ವಾಳ ಸಿ.ಜೆ.ಮತ್ತು ಜೆಎಂಎಫ್ ಸಿ ನ್ಯಾಯಾಲಯಕ್ಕೆ ಶರಣಾಗಿದ್ದಾನೆ. ಸಜೀಪ ಮೂಡ ಗ್ರಾಮದ ಪನೋಳಿಬೈಲ್ ನಿವಾಸಿ ಕಲಂದರ್ ನಿಸಾರ್ @ ಮಹಮ್ಮದ್ ನಿಸ್ಸಾರ್ ( 27) ಶರಣಾದ ಆರೋಪಿಯಾಗಿದ್ದಾನೆ. 2017 ಜು.4 ರಂದು ರಾತ್ರಿ ಬಿ.ಸಿ.ರೋಡಿನ ಉದಯ ಲಾಂಡ್ರಿಗೆ ನುಗ್ಗಿ ಶರತ್ ಮಡಿವಾಳರಿಗೆ ಮಾರಣಾಂತಿಕ ಹಲ್ಲೆಗೈಯಲಾಗಿತ್ತು. ಜು.7 ರಂದು ಸಾವನ್ನಪ್ಪಿದ್ದರು. ಸುಮಾರು ಒಂದು ವರ್ಷ 7 ತಿಂಗಳಿನಿಂದ ಕಲಂದರ್ ದಸ್ತಗಿರಿಗೆ ಸಿಗದೆ ತಲೆಮರೆಸಿಕೊಂಡಿದ್ದು ದ.ಕ. ಜಿಲ್ಲಾ ಸೆಷನ್ ನ್ಯಾಯಾಲಯ,ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಜಾಮಿನಿಗೆ ಪ್ರಯತ್ನಿಸಿದ್ದು ನ್ಯಾಯಾಲಯವು ಈತನ ಜಾಮೀನು ಅರ್ಜಿಯನ್ನು ತಿರಸ್ಕರಿಸಿ ವಜಾಮಾಡಿರುತ್ತದೆ. ಶುಕ್ರವಾರ ಈತ ಬಂಟ್ವಾಳ ಸಿ.ಜೆ.ಮತ್ತು ಜೆ.ಎಂ.ಎಫ್.ಸಿ.ನ್ಯಾಯಾಲಯದಲ್ಲಿ ನ್ಯಾಯಾಧೀಶರ ಮುಂದೆ ಶರಣಾಗಿದ್ದು ನ್ಯಾಯಾಲಯವು ಈತನಿಗೆ ನ್ಯಾಯಾಂಗ ಬಂಧನವನ್ನು ವಿಧಿಸಿದೆ. ಈ ಪ್ರಕರಣದಲ್ಲಿ ಹಿಂದೆ ಒಟ್ಟು 16 ಮಂದಿ ಆರೋಪಿಗಳನ್ನುಬಂಧಿಸಲಾಗಿದ್ದು, ಪ್ರಸ್ತುತ ಬಂಧಿತರ ಸಂಖ್ಯೆ 17 ಆಗಿದೆ.
