ಶ್ರೀ ಕ್ಷೇತ್ರ ಅರ್ಕುಳದಿಂದ ಶ್ರೀ ಕ್ಷೇತ್ರ ಪೊಳಲಿಗೆ ಧರ್ಮದೇವತೆಗಳ ಭಂಡಾರದ ಶೋಭಾಯಾತ್ರೆ
ಪೊಳಲಿ: ಪೊಳಲಿ ರಾಜರಾಜೇಶ್ವರಿ ದೇವಸ್ಥಾನದ ಪುನರ್ ನವೀಕರಣ ಬ್ರಹ್ಮಕಲಶೋತ್ಸವದ ಪುಣ್ಯವಸರದಲ್ಲಿ ಏಳೆಂಟು ದಶಕಗಳ ಬಳಿಕ ದೇವರ ಇಚ್ಚೆಯಂತೆ ಪೊಳಲಿ ಸನ್ನಿಧಾನದಲ್ಲಿ ಸಂಪನ್ನಗೊಳ್ಳಲಿರುವ ಅರ್ಕುಳ ಶ್ರೀ ಉಳ್ಳಾಕ್ಲು ಮಗೃಂತಾಯಿ ಧರ್ಮದೇವತೆಗಳ ನೇಮ ಸೇವೆಯು ಐತಿಹಾಸಿಕವಾಗಿ ಹಾಗೂ ಧಾರ್ಮಿಕವಾಗಿ ಮಹತ್ವವುಳ್ಳದ್ದು ಎಂದು ಶ್ರೀ ತಾರಾನಾಥ ಕೊಟ್ಟಾರಿ ಅಭಿಪ್ರಾಯಪಟ್ಟರು.
ಶ್ರೀ ತಾರಾನಾಥ ಕೊಟ್ಟಾರಿ ಅವರು ಇತ್ತೀಚೆಗೆ ಅರ್ಕುಳ ಬೀಡಿನಲ್ಲಿ ಸಭೆ ಸೇರಿದ್ದ ಊರ ಹಾಗೂ ಪರಊರ ಗಣ್ಯರ ಸಭೆಯಲ್ಲಿ ಮಾತನಾಡುತ್ತಿದ್ದರು. ತುಳುನಾಡಿನಲ್ಲಿಯೇ ಅತೀ ದೀರ್ಘವಾದ ಶ್ರೀ ಧರ್ಮದೇವತೆಗಳ ಭಂಡಾರದ ಶೋಭಾಯಾತ್ರೆಯು ಜನಮಾನಸದಲ್ಲಿ ಧಾರ್ಮಿಕ ಜಾಗೃತಿಯನ್ನು ಮೂಡಿಸಲಿದೆ ಎಂದು ತಿಳಿಸಿದರು.
ಪೊಳಲಿಗೆ ಮಾರ್ಚ್ 8 ರಂದು ಪ್ರಾತ:ಕಾಲ 6.30ಕ್ಕೆ ಅರ್ಕುಳ ಬೀಡಿನಿಂದ ಶ್ರೀ ಉಳ್ಳಾಕ್ಲು ಮಗೃಂತಾಯಿ ದೈವಗಳ ಭಂಡಾರದ ಶೋಭಾಯತ್ರೆಯು ಹೊರಟು ಮೇರಮಜಲು, ತೇವುಕಾಡು, ಮಹಮ್ಮಾಯಿಕಟ್ಟೆ, ಅಬ್ಬೆಟ್ಟು, ಅಮ್ಮುಂಜೆ, ಬಡಕಬೈಲು ಮಾರ್ಗವಾಗಿ 11.30 ಗೆ ಪೊಳಲಿ ತಲುಪಲಿದೆ. ಮಾರ್ಚ್ 13 ರ ಬ್ರಹ್ಮಕಲಶೋತ್ಸವದಂದು ಧರ್ಮದೇವತೆಗಳಿಗೆ ನೇಮ ಸೇವೆಯು ನಡೆದು, ಮಹಾಸಂಪೆÇ್ರೀಕ್ಷಣೆಯ ನಂತರ ಮಾರ್ಚ್ 14ರಂದು ಸಂಜೆ 4 ಕ್ಕೆ ಪೊಳಲಿಯಿಂದ ಹೊರಟು ಬಡಕಬೈಲು, ಧನುಪೂಜೆ, ಕಲ್ಪನೆ, ನೆತ್ರಕೆರೆ, ಫರಂಗಿಪೇಟೆ ಮಾರ್ಗವಾಗಿ ಅರ್ಕುಳ ಬೀಡು ತಲುಪಲಿದೆ. ಈ ಕಾರ್ಯಕ್ರಮ ಸಂಯೋಜನೆಗಾಗಿ ವಿವಿಧ ಗ್ರಾಮಗಳ ಪ್ರಮುಖರ ಸಭೆಯನ್ನು ಅರ್ಕುಳ ಬೀಡಿನಲ್ಲಿ ಕರೆಯಲಾಗಿತ್ತು.
ಕಂಪ ಸದಾನಂದ ಆಳ್ವ ಅವರು ಮಾತನಾಡುತ್ತಾ ಧಾರ್ಮಿಕ ಚೌಕಟ್ಟಿನಲ್ಲಿ ಸಂಪನ್ನಗೊಳ್ಳಲಿರುವ ಶ್ರೀ ಧರ್ಮದೇವತೆಗಳ ಶೋಭಾಯತ್ರೆ ಹಾಗೂ ನೇಮಸೇವೆಯಲ್ಲಿ ಭಕ್ತಜನರ ಭಾಗವಹಿಸುವಿಕೆ ಹಾಗೂ ಸಮರ್ಪಣಾ ಭಾವನೆ ಅತೀ ಮುಖ್ಯ ಎಂದು ತಿಳಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಡಾ.ಎ.ಜಯಕುಮಾರ್ ಶೆಟ್ಟಿ ಅವರು ಶ್ರೀ ಕ್ಷೇತ್ರ ಅರ್ಕುಳದ ಐತಿಹಾಸಿಕ ಹಿನ್ನೆಲೆ ಹಾಗೂ ಶ್ರೀ ಕ್ಷೇತ್ರ ಪೊಳಲಿ ಹಾಗೂ ಶ್ರೀ ಕ್ಷೇತ್ರ ಅರ್ಕುಳದ ಅವಿನಾಭವ ಸಂಬಂಧದ ಬಗ್ಗೆ ತಿಳಿಸಿದರು. ಅರ್ಕುಳ ಬೀಡು ರತ್ನರಾಜ ಶೆಟ್ಟಿ ಅವರು ಉಪಸ್ಥಿತರಿದ್ದರು. ಮಂಟಮೆ ದಿನಕರ ಕರ್ಕೇರ ಸ್ವಾಗತಿಸಿ ವಂದಿಸಿದರು.
