ಗುರುಪುರ : ಇಲ್ಲಿನ ಗೋಳಿದಡಿಗುತ್ತಿನಲ್ಲಿ ಕಳೆದ ತಿಂಗಳು 19ರಂದು ಜರುಗಿದ `ಗುತ್ತು ನಿಮಗೆಷ್ಟು ಗೊತ್ತು ? ಚಿಂತನ-ಮಂಥನ’ ಗೋಷ್ಠಿ ಯಶಸ್ವಿಯಾದ ಹಿನ್ನೆಲೆಯಲ್ಲಿ ಗೋಳಿದಡಿಗುತ್ತಿನ ಮನೆಯಲ್ಲಿ ಫೆ. 24ರಂದು ಧನ್ಯೋತ್ಸವ ಹಾಗೂ ಮುಂದಿನ ಕಾರ್ಯಗಳ ರೂಪುರೇಷೆಗಳ ಕುರಿತು ಚರ್ಚಾ ಕಾರ್ಯಕ್ರಮ ಜರುಗಿತು.
ಪ್ರಾಚೀನ ಭಾರತದ ಧರ್ಮಾಡಳಿತ ಪುನರ್ ಬಳಕೆಗೆ ತರುವ ದೂರದರ್ಶಿತ್ವ ಮತ್ತು ಉತ್ತರದಾಯಿತ್ವದಿಂದ ಗುತ್ತಿನಲ್ಲಿ ನಡೆದ ಧರ್ಮಸಭೆಯಲ್ಲಿ `ಪ್ರಾಚೀನ ಭಾರತದ ಧರ್ಮಾಡಳಿತ ಪುನರುತ್ಥಾನ ಕೂಟ’ ರಚಿಸಲಾಯಿತು. ಇದರಲ್ಲಿ ಗುತ್ತು-ಬೀಡು-ಬಾವ-ಬಾರಿಕೆ-ಪರಡಿ-ಮಾಗಂದಡಿಗಳ ಪ್ರಮುಖರು ಸೇರಿರುತ್ತಾರೆ.
ಚಿಕ್ಕಮಗಳೂರಿನ ವೇದ ವಿಜ್ಞಾನ ಮಂದಿರದ ಕೆ ಎಸ್ ನಿತ್ಯಾನಂದರು ಈ ಕೂಟದ ಮಾರ್ಗದರ್ಶಕರಾಗಿದ್ದು, ಕೂಟದಲ್ಲಿ ಐದು ಮಂದಿ ಗಡಿಕಾರರು ಸಂಚಾಲಕರಾಗಿ, 28 ಮಂದಿ ಗುತ್ತು, ಬೀಡು, ಬಾವ, ಬಾರಿಕೆ, ಪರಡಿ, ಮಾಗಂದಡಿಗಳ ಪ್ರತಿನಿಧಿಗಳು ಕಾರ್ಯ ನಿರ್ವಹಿಸಲಿದ್ದಾರೆ. ಕೂಟದ ಕಾರ್ಯವ್ಯಾಪ್ತಿ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಯಾಗಿರುತ್ತದೆ.
ಈ ದೇಶದ ಸಂವಿಧಾನದ ಆಶಯಗಳಿಗೆ ಪೂರಕವಾಗಿ ಗುತ್ತು, ಬೀಡು, ಬಾರಿಕೆ, ಪರಡಿ, ಮಾಗಂದಡಿಗಳ ಧರ್ಮಾಡಳಿತ ವ್ಯವಸ್ಥೆ ಪುನರ್‍ಬಳಕೆಗೆ ತಂದು ಸುತ್ತಲಿನ ಸಮಾಜದಲ್ಲಿ ಸತ್ಯ, ನ್ಯಾಯ, ಧರ್ಮಬದ್ಧವಾದ ಪ್ರಜಾಜನರ ಜೀವನ ವಿಧಾನ ರೂಪಿಸಿ, ಸಾಮಾಜಿಕ ನ್ಯಾಯ ಎತ್ತಿ ಹಿಡಿದು ಸುಭದ್ರ ಮತ್ತು ಬಲಿಷ್ಠ ಗ್ರಾಮ ಜೀವನ ರೂಪಿಸುವುದರೊಂದಿಗೆ ರಾಷ್ಟ್ರಧರ್ಮ ಎತ್ತಿಹಿಡಿಯುವುದಾಗಿದೆ ಎಂದು ಗೋಳಿದಡಿಗುತ್ತಿನ ಗಡಿಕಾರ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ವಿವರಿಸಿದರು.
ನಂದಳಿಕೆ ಚಾವಡಿ ಅರಮನೆಯಲ್ಲಿ ಮಾರ್ಚ್ 31ರಂದು ಬೆಳಿಗ್ಗೆ 10:30ಕ್ಕೆ ಕೂಟದ ಪ್ರಥಮ ಸಭೆ ಜರುಗಲಿದೆ ಎಂದರು. ಸಭೆಯಲ್ಲಿ ಕೆಲವಾರು ಗುತ್ತು, ಬೀಡು, ಬಾರಿಕೆ, ಪರಡಿ ಮಾಗಂದಡಿಗಳ ಯಜಮಾನರು, ಗಡಿಕಾರರು ಹಾಗೂ ಇತರರು ಪಾಲ್ಗೊಂಡಿದ್ದರು.

