ಗುರುಪುರ : ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಡ್ಡೂರು ಗ್ರಾಮದ ಕುಚ್ಚಿಗುಡ್ಡೆ ಎಂಬಲ್ಲಿ ಶಂಕಿತ ಜ್ವರ ಬಾಧಿಸಿರುವ ಕುರಿತು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ವೈದ್ಯಾಧಿಕಾರಿ ಡಾ. ರಾಮಕೃಷ್ಣ, ಅವರ ಸಿಬ್ಬಂದಿ ಹಾಗೂ ಇತರ ವೈದ್ಯರ ತಂಡ ಗುರುವಾರ ಕುಚ್ಚಿಗುಡ್ಡೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಕಳೆದೊಂದು ವಾರದಿಂದ ಕುಚ್ಚಿಗುಡ್ಡೆಯ ಕೆಲವು ಮಂದಿ ವಿಪರೀತ ಜ್ವರ ಕಾಣಿಸಿಕೊಂಡಿತ್ತು. ಏಳೆಂಟು ಮಂದಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದರು. ಗ್ರಾಪಂ ಪೂರೈಸುವ ಕುಡಿಯುವ ನೀರಿಂದ ನಿರ್ದಿಷ್ಟ ಪ್ರದೇಶದಲ್ಲಿ ಶಂಕಿತ ಜ್ವರ ಹರಡಿರಬೇಕೆಂದು ಕೆಲವರು ಶಂಕಿಸಿದ್ದರು.
ಈ ಹಿನ್ನೆಲೆಯಲ್ಲಿ ಜ್ವರ ಬಾಧಿಸಿರುವ ಪ್ರತಿಯೊಂದು ಮನೆಗೂ ಭೇಟಿ ನೀಡಿದ ಗ್ರಾಪಂ ಸದಸ್ಯರಾದ ಯಶವಂತ ಶೆಟ್ಟಿ ಮತ್ತು ವಿಜಯಲಕ್ಷ್ಮೀ ಚಿಕಿತ್ಸೆಗೆ ಸಲಹೆ ನೀಡಿರುವುದಲ್ಲದೆ ನೀರಿನ ಪರಿಶೀಲನೆಗಾಗಿ ಜಿಲ್ಲಾ ಆರೋಗ್ಯ ಇಲಾಖೆಗೆ ಮಾಹಿತಿ ಮುಟ್ಟಿಸಿದ್ದರು. ಇದೇ ವಿಷಯದಲ್ಲಿ ಸ್ಥಳೀಯ ಜಿಪಂ ಸದಸ್ಯ ಯು ಪಿ ಇಬ್ರಾಹಿಂ ಜಿಪಂ ಸಭೆಯಲ್ಲಿ ಗಮನಹರಿಸಿದ್ದರು. ಮನವಿಗೆ ಸ್ಪಂದಿಸಿದ ಆರೋಗ್ಯ ಇಲಾಖೆಯ ಸಿಬ್ಬಂದಿ ಕಳೆದ ವಾರವೇ ಸ್ಥಳಕ್ಕೆ ಆಗಮಿಸಿ ನೀರಿನ ಮಾದರಿ ಪರೀಕ್ಷೆಗೆ ಕೊಂಡೊಯ್ದಿದ್ದರು.
ಇಂದು ಸ್ಥಳಕ್ಕೆ ಆಗಮಿಸಿದ ಡಾ. ರಾಮಕೃಷ್ಣ ಹಾಗೂ ಕೆಲವು ಹಿರಿಯ ವೈದ್ಯಾಧಿಕಾರಿಗಳು ಕುಚ್ಚಿಗುಡ್ಡೆಗೆ ಆಗಮಿಸಿ, ಕೆಲವು ಮನೆಗಳಿಗೆ ಭೇಟಿ ನೀಡಿ ಶಂಕಿತ ಜ್ವರ ಭೀತಿ ನಿವಾರಣೆಗೆ ಪ್ರಯತ್ನಿಸಿದರು. ತಂಡದೊಂದಿಗೆ ಗ್ರಾಪಂ ಸಿಬ್ಬಂದಿ ಸಹಕರಿಸಿದರು.
“ಗ್ರಾಪಂ ಪೂರೈಕೆಯ ಕುಡಿಯುವ ನೀರು ಉತ್ತಮವಾಗಿದೆ. ನೀರಿಲ್ಲ ಜ್ವರ ಬಾಧಿಸಿಲ್ಲ. ನೀರು ಕುಡಿಯಬಹುದು. ಜ್ವರದ ಬಗ್ಗೆ ಭೀತಿ ಪಡುವ ಅಗತ್ಯವಿಲ್ಲ. ಸ್ವಚ್ಚತೆಯತ್ತ ಗಮನಹರಿಸಿ. ಇದು ಸಾಮಾನ್ಯ ಜ್ವರವಾಗಿದ್ದು, ಕೆಲವರಿಗೆ ವಿಪರೀತ ಜ್ವರ ಬಾಧಿಸಿರಬಹುದು. ಸೂಕ್ತ ಚಿಕಿತ್ಸೆಯಿಂದ ಜ್ವರ ಗುಣಮುಖವಾಗಲಿದೆ” ಎಂದು ವೈದ್ಯಾಧಿಕಾರಿ ವಿಶ್ವಾಸಹರಿಸಿದರು.
