ಕೈಕಂಬ: ಕುಪ್ಪೆಪದವು ಗ್ರಾಮ ಪಂಚಾಯತ್ ವ್ಯಾಪ್ತಿಯ 2018-19ರ ದ್ವಿತೀಯ ಹಂತದ ಗ್ರಾಮ ಸಭೆಯನ್ನು ರಾಜೀವ ಗಾಂಧಿ ಸೇವಾ ಕೇಂದ್ರ ಕುಪ್ಪೆಪದವಿನಲ್ಲಿ ನಿನ್ನೆ ನಡೆಸಲಾಯಿತು. ಕುಪ್ಪೆಪದವಿನಲ್ಲಿ ಈಗಾಗಲೇ ಇರುವ ವೈನ್‍ಶಾಪನ್ನು ಅರಮನೆ ಬಂಡಿರಸ್ತೆಯ ಬದಿಯಲ್ಲಿ ನೂತನವಾಗಿ ನಿರ್ಮಿಸಿದ ಕಟ್ಟಡಕ್ಕೆ ಸ್ಥಳಾಂತರಿಸುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು . ಮಕ್ಕಳು, ಮಹಿಳೆಯರು ಓಡಾಡುವ ಸ್ಥಳದಲ್ಲಿ ವೈನ್‍ಶಾಪ್ ತೆರಯುವುದರಿಂದ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.IMG-20190131-WA0019

ಮಹಿಳಾ ಮತ್ತು ಮಕ್ಕಳ ಇಲಾಖೆಯ ಮಾಲಿನಿ ಮಾತಾಡಿ, ಭಾಗ್ಯಲಕ್ಷ್ಮಿ ಹಾಗೂ ಮಾತೃಶ್ರೀ ಯೋಜನೆಯ ಸೌಲಭ್ಯಗಳ ಬಗ್ಗೆ ವಿವರಿಸಿದರು. ಕಂದಾಯ ಇಲಾಖೆಯ ಪರವಾಗಿ ಮಾತಾಡಿದ ಕುಪ್ಪೆಪದವು ಗ್ರಾಮಕರಣಿಕ ದೇವರಾಯ, ಅಕ್ರಮ-ಸಕ್ರಮ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನಗಳ ಬಗ್ಗೆ, ಕ್ರಮಬದ್ಧವಾಗಿ ದಾಖಲೆ ಸಹಿತ ಅರ್ಜಿಸಲ್ಲಿಸುವ ಕುರಿತು ಗ್ರಾಮಸ್ಥರಲ್ಲಿ ವಿವರಿಸಿದರು.

ಕುಪ್ಪೆಪದವು ಅಚಾರಿಜೋರ ಶಾಲೆಯಲ್ಲಿ ಮತಚಲಾವಣೆಗೆ ಮತಗಟ್ಟೆಯನ್ನು ತೆರೆಯುವಂತೆ ಗ್ರಾಮಸ್ಥರು ಒತ್ತಾಯಿಸಿದರು. ಕಲ್ಲಾಡಿಯ ಮತಗಟ್ಟೆಗೆ ಮತಚಲಾವಣೆಗೆ ತೆರಳಲು ಕಷ್ಟವಾಗುವುದರಿಂದ ಅಚಾರಿಜೋರದ ಶಾಲೆಯಲ್ಲಿ ಮತಗಟ್ಟೆಯನ್ನು ತೆರೆದರೆ ಅನುಕೂಲವಾಗುತ್ತದೆ ಎಂದು ಗ್ರಾಮಸ್ಥರು ತಿಳಿಸಿದರು. ಪಂ. ಉಪಾಧ್ಯಕ್ಷ ಡಿ.ಪಿ. ಹಮ್ಮಬ್ಬ ಮಾತಾಡಿ, ಈ ಬಗ್ಗೆ ಪಂಚಾಯತ್‍ನಲ್ಲಿ ನಿರ್ಣಯ ಮಾಡಲಾಗಿದ್ದು, ತಾಲೂಕು ಪಂಚಾಯತ್‍ಗೆ ಈ ನಿರ್ಣಯವನ್ನು ಕಳುಹಿಸಲಾಗಿದೆ ಎಂದು ವಿವರಿಸಿದರು.

ಸಿಪಿಐ ಮುಖಂಡ ಸದಾಶಿವ ದಾಸ್ ಮಾತಾಡಿ, ಪ್ರತಿಗ್ರಾಮ ಸಭೆಯಲ್ಲಿ ಹಿಂದಿನ ಗ್ರಾಮಸಭೆಗಳಲ್ಲಿ ಕೈಗೊಂಡ ನಿರ್ಣಯಗಳನ್ನು ಓದಿಹೇಳಲಾಗುತ್ತದೆ ಆದರೆ ಅವುಗಳಲ್ಲಿ ಎಷ್ಟು ನಿರ್ಣಯಗಳು ಅನುಷ್ಠಾನಕ್ಕೆ ಬಂದಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ನೀಡುವುದಿಲ್ಲ. ಮತ್ತೆ ಹೊಸದಾಗಿ ಕೈಗೊಂಡ ನಿರ್ಣಯಗಳನ್ನು ಮುಂದಿನ ಗ್ರಾಮಸಭೆಗಳಲ್ಲಿ ಓದಿ ಹೇಳಾಗುತ್ತದೆ. ನಿರ್ಣಯಗಳನ್ನು ಅನುಷ್ಠಾನಗೊಳಿಸಲಾಗದಿದ್ದರೆ ಆದರೆ ಯಾವ ಪುರುಷಾರ್ಥಕ್ಕಾಗಿ ಈ ನಿರ್ಣಯಗಳನ್ನು ತೆಗೆದುಕೊಳ್ಳುವುದು ಎಂದು ತರಾಟೆಗೆ ತೆಗೆದುಕೊಂಡರು. ಕುಪ್ಪೆಪದವು ಉಪಆರೋಗ್ಯ ಕೇಂದ್ರ ಸಿಬ್ಬಂದಿಯ ವರ್ತನೆಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತವಾಯಿತು. ಅನಾರೋಗ್ಯದಿಂದ ಆಸ್ಪತ್ರೆಗೆ ಬರುವ ರೋಗಿಗಳ ಸಮಸ್ಯೆಗಳ ಬಗ್ಗೆ ಸಿಬ್ಬಂದಿ ಸರಿಯಾಗಿ ಸ್ಪಂದಿಸುವುದಿಲ್ಲ. ತಾತ್ಕಾಲಿಕ ವೈದ್ಯಾದಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದು ಖಾಯಂ ವೈದ್ಯಾಧಿಕಾರಿಯನ್ನು ನೇಮಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದು, ಈ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಗುವುದೆಂದು ತಿಳಿಸಿದರು.

ಮೆಸ್ಕಾಂ ಅಧಿಕಾರಿಯ ಗೈರು ಹಾಜರಿಯ ಬಗ್ಗೆ ಗ್ರಾಮಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತವಾದಾಗ ಉಪಾಧ್ಯಕ್ಷ ಮೆಸ್ಕಾಂನ ಹಿರಿಯ ಅಧಿಕಾರಿಗಳನ್ನು ದೂರವಾಣಿಯಲ್ಲಿ ಸಂಪರ್ಕಿಸಿದರು. ಜೆಇ ಅವರು ರಜೆಯಲ್ಲಿದ್ದ ಕಾರಣ ಸಭೆಗೆ ಬರಲು ಅನನುಕೂಲವಾಯಿತೆಂಬ ಮಾಹಿತಿ ಸಭೆಗೆ ನೀಡಲಾಯಿತು. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಗ್ರಾಮಸ್ಥರು ಮೆಸ್ಕಾಂನಿಂದ ಹಲವು ಸಮಸ್ಯೆಗಳಿದ್ದು, ಈ ಬಗ್ಗೆ ಚರ್ಚಿಸಲು ಅದಿಕಾರಿಗಳನ್ನು ಗ್ರಾಮಸಭೆಗೆ ಕಳುಹಿಸಿಕೊಡುವುದು ಮೆಸ್ಕಾಂನ ಜವಾಬ್ದಾರಿ ಎಂದು ಗ್ರಾಮಸ್ಥರು ತಿಳಿಸಿದರು. ಮುಂದಿನ ಸಭೆಗಳಲ್ಲಿ ಮೆಸ್ಕಾಂ ಅದಿಕಾರಿಗಳನ್ನು ಕಡ್ಡಾಯವಾಗಿ ಭಾಗವಹಿಸುವಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದರು.

ಅರಣ್ಯ, ಆರೋಗ್ಯ, ಶಿಕ್ಷಣ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ಪಶುಸಂಗೋಪನೆ ಇಲಾಖೆಯ ವಿಶ್ವಾರಾಧ್ಯ ನೋಡಲ್ ಅಧಿಕಾರಿಯಾಗಿದ್ದರು. ಗ್ರಾ.ಪಂ. ಅಧ್ಯಕ್ಷೆ ಲೀಲಾವತಿ, ಪಿಡಿಓ ಸವಿತಾ ಮಂದೋಲಿಕರ, ಪಿಡಬ್ಲ್ಯುಡಿ ಇಂಜಿನಿಯರ್ ವಿಶ್ವನಾಥ್, ಬಜಪೆ ಠಾಣಾ ಮಹಿಳಾ ಪೊಲೀಸ್ ಪೇದೆ ಅಕ್ಷತಾ, ಗ್ರಾ.ಪಂ. ಸದಸ್ಯರುಗಳು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *